ಢಾಕಾ, ಡಿ. 24 (DaijiworldNews/AK): ಬಾಂಗ್ಲಾದೇಶ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುತ್ತಿದೆ. ಢಾಕಾದಲ್ಲಿ ಕಚ್ಚಾ ಬಾಂಬ್ ಸ್ಫೋಟದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೊಗ್ಬಜಾರ್ ಪ್ರದೇಶದ ಫ್ಲೈಓವರ್ನಿಂದ ದಾಳಿಕೋರರು ಕಚ್ಚಾ ಸ್ಫೋಟಕವನ್ನು ಎಸೆದ ನಂತರ ಬುಧವಾರ ಸಂಜೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಘಬಜಾರ್ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕದ ಮುಂಭಾಗದ ಫ್ಲೈಓವರ್ ಕೆಳಗೆ ಈ ಸ್ಫೋಟ ಸಂಭವಿಸಿದೆ.
ಸ್ಫೋಟಕ ಸಾಧನವನ್ನು ಫ್ಲೈಓವರ್ ಮೇಲಿನಿಂದ ಎಸೆಯಲಾಯಿತು. ನೆಲಕ್ಕೆ ಬಿದ್ದಂತೆ ಸ್ಫೋಟಕ ಬ್ಲಾಸ್ಟ್ ಆಗಿದೆ. ಸ್ಫೋಟದಲ್ಲಿ ಸಿಯಾಮ್ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಕುಟುಂಬಸ್ಥರು ಮೃತನ ಗುರುತು ಪತ್ತೆಹಚ್ಚಿದ್ದಾರೆ.
ಸಿಯಾಮ್ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಸ್ಫೋಟದ ಸಮಯದಲ್ಲಿ ಆ ಪ್ರದೇಶದಲ್ಲಿದ್ದ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಘಟನೆಯ ನಂತರ ಸ್ಥಳೀಯವಾಗಿ ಭೀತಿ ಹರಡುತ್ತಿದ್ದಂತೆ ಪೊಲೀಸರು ಆ ಪ್ರದೇಶವನ್ನು ಸುತ್ತುವರೆದರು. ದಾಳಿಕೋರರು ಸಾಧನವನ್ನು ಎಸೆದ ತಕ್ಷಣ ಪರಾರಿಯಾಗಿದ್ದರು. ಇನ್ನು ಸ್ಫೋಟದ ಉದ್ದೇಶ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಯಾವುದೇ ಗುಂಪು ಇದುವರೆಗೆ ಹೊಣೆಗಾರಿಕೆಯನ್ನು ಹೊತ್ತುಕೊಂಡಿಲ್ಲ.