ಕಿಂದು, ಡಿ. 25 (DaijiworldNews/TA): ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಕಿಂದು ವಿಮಾನ ನಿಲ್ದಾಣದಲ್ಲಿ ಅಸಾಮಾನ್ಯ ಘಟನೆಯೊಂದು ನಡೆದಿದ್ದು, ವಿಮಾನದಿಂದ ಕೆಳಗಿಳಿಯಲು ಮೆಟ್ಟಿಲುಗಳಿಲ್ಲದ ಕಾರಣ ಪ್ರಯಾಣಿಕರು ಸ್ವತಃ ವಿಮಾನದಿಂದ ಜಿಗಿದು ಇಳಿದಿದ್ದಾರೆ.

ಮಣಿಮಾ ಪ್ರಾಂತ್ಯದಲ್ಲಿರುವ ಕಿಂದು ವಿಮಾನ ನಿಲ್ದಾಣದಲ್ಲಿ ಏರ್ ಕಾಂಗೋ ವಿಮಾನ ಇಳಿದ ಬಳಿಕ ಪ್ರಯಾಣಿಕರು ಗಂಟೆಗಟ್ಟಲೆ ವಿಮಾನದೊಳಗೆ ಕಾಯಬೇಕಾಯಿತು. ವಿಮಾನದಿಂದ ಇಳಿಯಲು ಅಗತ್ಯವಾದ ಮೆಟ್ಟಿಲುಗಳು ಒದಗಿಸದ ಹಿನ್ನೆಲೆಯಲ್ಲಿ ಬೇಸರಗೊಂಡ ಪ್ರಯಾಣಿಕರು ಬಾಗಿಲಿನಿಂದ ಸುಮಾರು 5–6 ಅಡಿ ಎತ್ತರದಿಂದ ಕೆಳಗೆ ಹಾರಿರುವ ದೃಶ್ಯಗಳು ಗಮನ ಸೆಳೆದಿವೆ.
ಕಿಂದು ವಿಮಾನ ನಿಲ್ದಾಣವು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು, ಇಂತಹ ಘಟನೆಗಳು ಸಣ್ಣ ವಿಮಾನ ನಿಲ್ದಾಣಗಳಲ್ಲಿ ಇರುವ ವ್ಯವಸ್ಥಾತ್ಮಕ ಸಮಸ್ಯೆಗಳನ್ನು ಬಹಿರಂಗಪಡಿಸುತ್ತಿವೆ. ಸಂಪರ್ಕ ವಿಸ್ತರಣೆಯ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಿಮಾನಯಾನ ಸಂಸ್ಥೆಗಳಿಗೆ ಈ ಘಟನೆ ಮುಜುಗರ ಉಂಟುಮಾಡಿದೆ. ಘಟನೆಯ ಬಳಿಕ ವಿಮಾನ ನಿಲ್ದಾಣದ ಸೌಲಭ್ಯಗಳು ಹಾಗೂ ಪ್ರಯಾಣಿಕರ ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.