ಢಾಕಾ, ಡಿ. 25 (DaijiworldNews/AA): ಯುನೈಟೆಡ್ ಕಿಂಗ್ಡಮ್ನಲ್ಲಿ 17 ವರ್ಷಗಳಿಗೂ ಹೆಚ್ಚು ಕಾಲದ ಸ್ವಯಂ ಗಡಿಪಾರು ಮುಗಿಸಿ ಢಾಕಾಗೆ ಆಗಮಿಸಿದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ಅವರನ್ನು ಬಾಂಗ್ಲಾದೇಶದ ಸಾವಿರಾರು ಜನರು ಸ್ವಾಗತಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ, 60 ವರ್ಷದ ಬಿಎನ್ಪಿ ಹಂಗಾಮಿ ಅಧ್ಯಕ್ಷ ರೆಹಮಾನ್, ಮುಂಬರುವ ಫೆಬ್ರವರಿ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ಸ್ಪರ್ಧಿಸಲಿದ್ದಾರೆ.
ಕುಟುಂಬದ ಸಾಕು ಬೆಕ್ಕು ಕೂಡ ಅವರೊಂದಿಗೆ ಪ್ರಯಾಣ ಬೆಳೆಸಿತು. ಜೊತೆಗೆ ಅವರ ಇಬ್ಬರು ಆಪ್ತ ಸಹಾಯಕರಾದ ಅಬ್ದುರ್ ರೆಹಮಾನ್ ಸುನಿ ಮತ್ತು ಕಮಲ್ ಉದ್ದೀನ್ ಕೂಡ ಬಂದಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ, ಅವರನ್ನು ಬಿಎನ್ಪಿ ಸ್ಥಾಯಿ ಸಮಿತಿ ಸದಸ್ಯರು ಸ್ವಾಗತಿಸಿದರು. ಅಲ್ಲಿಂದ ಅವರು ವಿಶೇಷವಾಗಿ ಆಮದು ಮಾಡಿಕೊಂಡ ಎರಡು ಬುಲೆಟ್ ಪ್ರೂಫ್ ವಾಹನಗಳ ಪೈಕಿ ಒಂದರಲ್ಲಿ ಸ್ವಾಗತ ಸಮಾರಂಭಕ್ಕೆ ಪ್ರಯಾಣ ಬೆಳೆಸಿದರು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತು ಸ್ವಾಗತಿಸಿದರು.
ಸ್ವಾಗತ ಸಮಾರಂಭದಲ್ಲಿ, ರೆಹಮಾನ್ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಿಎನ್ಪಿಯ ಹಿರಿಯ ನಾಯಕರು ಮತ್ತು ಪ್ರಮುಖ ವ್ಯಕ್ತಿಗಳು ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ರೆಹಮಾನ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 50 ಲಕ್ಷ ಜನರು ಸೇರುವ ನಿರೀಕ್ಷೆಯಿದೆ.
ತಮ್ಮ ಭಾಷಣದ ನಂತರ, ರೆಹಮಾನ್ ಅವರು ಎವರ್ಕೇರ್ ಆಸ್ಪತ್ರೆಗೆ ತೆರಳಿ ಅನಾರೋಗ್ಯ ಪೀಡಿತ ತಾಯಿ ಮಾಜಿ ಪ್ರಧಾನಿ ಜಿಯಾ ಅವರನ್ನು ಭೇಟಿ ಮಾಡಲಿದ್ದಾರೆ. ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ತಾಯಿಯನ್ನು ಭೇಟಿಯಾದ ನಂತರ, ರೆಹಮಾನ್ ಕುಟುಂಬವು ಗುಲ್ಶನ್ -2 ನಲ್ಲಿರುವ ಜಿಯಾ ಕುಟುಂಬದ ನಿವಾಸವಾದ ಫಿರೋಜಾಗೆ ಭೇಟಿ ನೀಡಲಿದೆ.