ಟೆಹ್ರಾನ್, ಜ. 10 (DaijiworldNews/AA): ಇರಾನ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಇದೀಗ 13 ದಿನಕ್ಕೆ ಕಾಲಿಟ್ಟಿದ್ದು, ಹಿಂಸಾಚಾರ ಮತ್ತಷ್ಟು ಹೆಚ್ಚಾಗಿದೆ. ಸರ್ಕಾರದ ಸೂಚನೆ ಮೇರೆಗೆ ಭದ್ರತಾಪಡೆಗಳು ಹಲವು ಸ್ಥಳಗಳಲ್ಲಿ ಗುಂಡು ಹಾರಿಸಿದ್ದು, 217 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ.

ರಾಜಧಾನಿ ಟೆಹ್ರಾನ್ ನಲ್ಲಿರುವ 6 ಆಸ್ಪತ್ರೆಗಳಲ್ಲಿ ಕನಿಷ್ಠ 217 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಈ ಪೈಕಿ ಹೆಚ್ಚಿನವರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದುಬಂದಿದೆ. ಅಲ್ಲದೇ ಉತ್ತರ ಟೆಹ್ರಾನ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಯುವ ಸಮೂಹದ ಮೇಲೆ ಏಕಾಏಕಿ ಗುಂಡು ಹಾರಿಸಿದ್ದು, 30 ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಖಮೇನಿ ಸರ್ಕಾರದ ವಿರುದ್ಧ 2025ರ ಡಿ.28 ರಂದು ಪ್ರಾರಂಭವಾದ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ದೇಶಾದ್ಯಂತ ಇಂಟರ್ನೆಟ್ ಮತ್ತು ಫೋನ್ ಸಂಪರ್ಕಗಳನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಇರಾನ್ನಿಂದ ಗಡಿಪಾರು ಆಗಿರುವ ಯುವರಾಜ ರೇಜಾ ಪಹ್ಲವಿ ಅವರು ಸಾಮೂಹಿಕ ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ತಡರಾತ್ರಿ ಟೆಹರಾನ್ ಮತ್ತು ಇತರ ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಖಮೇನಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಖಮೇನಿ ವಿರುದ್ಧ ಎಂದು ಜನರು ಘೋಷಣೆ ಕೂಗಿ ಟೆಹರಾನ್ನಲ್ಲಿರುವ ಸರ್ಕಾರಿ ಕಚೇರಿಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.