ಕರಾಚಿ, ಜು20(Daijiworld News/SS): ಪುಲ್ವಾಮಾ ಉಗ್ರ ದಾಳಿಯ ಬಳಿಕ ಭಾರತೀಯ ವಾಯುಪಡೆ ಕಳೆದ ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಕೋಟ್ ಮೇಲೆ ವಾಯುದಾಳಿ ನಡೆಸಿ ಜೈಷೆ ಮೊಹಮ್ಮದ್ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿತ್ತು. ಇದಾದ ನಂತರ ಪಾಕಿಸ್ತಾನ ತನ್ನ ವಾಯುಪ್ರದೇಶದಲ್ಲಿ ಭಾರತದ ವಿಮಾನಗಳ ಹಾರಾಟಕ್ಕೆ ಸಂಪೂರ್ಣ ತಡೆಯೊಡ್ಡಿತ್ತು. ಇದರಿಂದ ಪಾಕ್ಗೆ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಬಾಲಕೋಟ್ ನ ಉಗ್ರ ತಾಣದ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿದ ನಂತರ ಪಾಕ್ ತನ್ನ ವಾಯು ಪ್ರದೇಶವನ್ನು ಭಾರತದ ನಾಗರಿಕ ವಿಮಾನಗಳಿಗೆ ನಿರ್ಬಂಧಿಸಿದ್ದರಿಂದ ಸುಮಾರು 8.5 ಕೋಟಿ ಅರಬ್ ಮೌಲ್ಯದ ರೂ. ನಷ್ಟವಾಗಿದೆ ಎಂದು ಅಲ್ಲಿನ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಸ್ಎಸ್) ತಿಳಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ವಾಯುಯಾನ ಸಚಿವ ಗುಲಾಮ್ ಸರ್ವರ್ ಖಾನ್, ವಾಯುಯಾನ ಮುಚ್ಚಿದ್ದರಿಂದ ನಮ್ಮ ಉದ್ಯಮಕ್ಕೆ ದೊಡ್ಡ ನಷ್ಟವಾಗಿದೆ. ಆದರೆ, ನಿರ್ಬಂಧದಿಂದಾಗಿ ಪಾಕಿಸ್ತಾನಕ್ಕಿಂತ ಭಾರತವು ಹೆಚ್ಚು ತೊಂದರೆ ಎದುರಿಸಬೇಕಾಯಿತು. ಪಾಕ್'ಗಿಂತ ಭಾರತ ಎರಡು ಪಟ್ಟು ಹೆಚ್ಚು ನಷ್ಟ ಅನುಭವಿಸಿದೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಎರಡು ದೇಶಗಳಿಗೆ ಸೌಹಾರ್ದತೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಸರ್ಕಾರಿ ವಿಮಾನಯಾನ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವುದು ಇಮ್ರಾನ್ ಖಾನ್ ಸರ್ಕಾರದ ಉದ್ದೇಶವಾಗಿದೆ. ಪಿಐಎ ಅನ್ನು ಹಂತ ಹಂತವಾಗಿ ಹೆಚ್ಚಿಸಿ, 2025 ರವರೆಗೆ 14 ಹೊಸ ವಿಮಾನಗಳನ್ನು ಸೇರಿಸಲಾಗುವುದು ಎಂದು ತಿಳಿಸಿದರು.