ವಾಷಿಂಗ್ಟನ್, ಜು 22 (Daijiworld News/MSP): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ಗೆ ಅಮೇರಿಕಾ ಪ್ರವಾಸದಲ್ಲಿದ್ದು, ಅಮೇರಿಕಕ್ಕೆ ಆಗಮನದ ವೇಳೆ ಟ್ರಂಪ್ ಸರ್ಕಾರ ವಿಮಾನ ನಿಲ್ದಾಣಕ್ಕೆ ಯಾರೋಬ್ಬರನ್ನು ಇಮ್ರಾನ್ ಖಾನ್ ಸ್ವಾಗತಕ್ಕೆ ಕಳುಹಿಸದೆ ಮುಖಭಂಗ ಅನುಭವಿಸಿದ್ದರು. ಇದೀಗ ಮತ್ತೊಮ್ಮೆ ಪಾಕಿಸ್ತಾನ ಪಿಎಂ ಇಮ್ರಾನ್ ಖಾನ್ ಮುಜುಗರದ ಸನ್ನಿವೇಶ ಎದುರಿಸಿದ್ದಾರೆ.
ಸಭೆಯೊಂದರಲ್ಲಿ ಇಮ್ರಾನ್ ಖಾನ್ ಭಾಷಣ ಮಾಡುತ್ತಿದ್ದ ಸಂದರ್ಭ ಅಲ್ಲಿ ನೆರೆದಿದ್ದ ಕೆಲ ಯುವಕರು ಪಾಕ್ ವಿರುದ್ಧ ಘೋಷಣೆ ಕೂಗಿದ್ದಾರೆ. ಪಾಕ್ನಲ್ಲಿ ಅಲ್ಪಸಂಖ್ಯಾತರು ಎಂದು ಗುರುತಿಸಲ್ಪಟ್ಟ ಸಿಂಧಿ, ಬಲೂಚಿ ಮತ್ತು ಮೊಹಜಿರ್ಸ್ ಜನಾಂಗಗಳಿಗೆ ಸೇರಿದ ಅನಿವಾಸಿ ಪಾಕಿಸ್ತಾನಿಯರ ಮೇಲೆ ಪಾಕಿಸ್ತಾನದ ಭದ್ರತಾ ಪಡೆಗಳು ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿವೆ ಎಂದು ಆರೋಪಿಸಿ ಪಾಕ್ ಪ್ರಧಾನಿಗೆ ಧಿಕ್ಕಾರ ಕೂಗಿದ್ದಾರೆ.
ಆದರೆ ಪ್ರತಿಭಟನಕಾರರು ಸಭೆಯ ಮುಖ್ಯ ವೇದಿಕೆಯಿಂದ ದೂರದಲ್ಲಿ ಇದ್ದುದರಿಂದ ಇಮ್ರಾನ್ ಖಾನ್ ಭಾಷಣಕ್ಕೆ ಯಾವುದೇ ತೊಂದರೆಗಳಾಗದೆ ಅವರು ಭಾಷಣ ಮುಂದುವರಿಸಿದರು ಎಂದು ವರದಿಯಾಗಿದೆ. ನಂತರ ಪ್ರತಿಭಟನಾಕಾರನ್ನು ಭದ್ರತಾ ಸಿಬ್ಬಂದಿಗಳು ಸಭಾಂಗಣದಿಂದ ಹೊರಕಳುಹಿಸಿದ್ದಾರೆ.