ವಾಷಿಂಗ್ಟನ್, ಜು 23 (Daijiworld News/MSP): ಭಾರತ ಮತ್ತು ಪಾಕಿಸ್ತಾನ ನಡುವೆ ಇರುವ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತಿಗೆ ಅಮೇರಿಕಾ ಸ್ಪಷ್ಟೀಕರಣ ನೀಡಿದೆ.
ಪಾಕ್ -ಭಾರತದ ನಡುವೆ ಇರುವ ಕಾಶ್ಮೀರದ ಬಿಕ್ಕಟ್ಟಿಗೆ ಮಧ್ಯಸ್ಥಿಕೆ ವಹಿಸಲು ನಿಮಗೆ ಆಹ್ವಾನವನ್ನೇ ನೀಡಿಲ್ಲ, ಯಾವುದೇ ಸಮಸ್ಯೆ ಇದ್ದರೂ ದ್ವಿಪಕೀಯ ಮಾತುಕತೆಗೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ, ಇದಕ್ಕೆ ಮಧ್ಯಸ್ಥಿಕೆ ಬೇಕಿಲ್ಲ ಎಂದು ಭಾರತ ಅಮೇರಿಕಾ ಹೇಳಿಕೆಯನ್ನು ತಿರಸ್ಕರಿಸಿತ್ತು. ಇದರ ಬೆನ್ನಲೇ ಎಚ್ಚೆತ್ತುಕೊಂಡ ಅಮೇರಿಕಾ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಅಮೇರಿಕದ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಭಾಗದ ಹಂಗಾಮಿ ಸಹಾಯಕ ಕಾರ್ಯದರ್ಶಿ ಆಲಿಸ್ ವೆಲ್ಸ್ ಅವರು, ಅಮೇರಿಕಾವು ಭಾರತ ಹಾಗೂ ಪಾಕಿಸ್ತಾನದ ನಡುವಿನ ವಿವಾದ ಬಗೆಹರಿಸಲು ಸಹಾಯ ಮಾಡಲು ತಯಾರಿದೆ ಎಂದಷ್ಟೇ ಹೇಳಿದ್ದು ಹೊರತು ಮಧ್ಯಸ್ಥಿಕೆ ವಹಿಸುತ್ತದೆ ಎಂದು ಅಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆಲಿಸ್ ವೆಲ್ಸ್, ಎರಡೂ ದೇಶಗಳೂ ಕುಳಿತು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದನ್ನು ಅಮೇರಿಕಾ ಸ್ವಾಗತಿಸುತ್ತದೆ. ಈ ವಿಚಾರವಾಗಿ ಅಮೇರಿಕಾ ಸಹಾಯ ಮಾಡಲು ಸಿದ್ಧ ಎಂದು ತಿಳಿದ್ದಾರೆ.