ಕಾಬೂಲ್, ಜು 25 (Daijiworld News/RD): ಅಫ್ಘಾನಿಸ್ತಾನದಲ್ಲಿ ಉಗ್ರರ ದಾಳಿ ಹೆಚ್ಚಾಗುತ್ತಿದ್ದು, ಕಾಬೂಲ್ನಲ್ಲಿ ಇಂದು ತ್ರಿವಳಿ ಬಾಂಬ್ ಸ್ಫೋಟಗೊಂಡ ಪರಿಣಾಮ 12 ಮಂದಿ ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ.
ಮೊದಲು ಸರ್ಕಾರಿ ನೌಕರರು ಪ್ರಯಾಣಿಸುತ್ತಿದ್ದ ಮಿನಿಬಸ್ಗೆ ಅಂಟಿಸಲಾದ ಮ್ಯಾಗ್ನೆಟಿಕ್ ಬಾಂಬ್ ಸ್ಫೋಟಗೊಂಡಿದ್ದು, ತದ ನಂತರ ಸ್ಥಳಕ್ಕೆ ಬಂದ ಆತ್ಮಾಹುತಿ ಬಾಂಬ್ ದಾಳಿಕೋರರಿಂದ ಎರಡನೇ ಬಾಂಬ್ ಸ್ಫೋಟಗೊಂಡಿದ್ದು, ಬಳಿಕ ಅಪರಿಚಿತ ಉಗ್ರರು ಕಾರನ್ನು ಸ್ಫೋಟಿಸಿದಾಗ ಮೂರನೇ ಸ್ಫೋಟ ಸಂಭವಿಸಿದೆ ಎಂದು ಕಾಬೂಲ್ನ ಆಂತರಿಕ ಸಚಿವಾಲಯದ ವಕ್ತಾರ ನಸ್ರತ್ ರಹೀಮಿ ಹೇಳಿದ್ದಾರೆ.
ಅಫ್ಘಾನಿಸ್ತಾನ್ದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ನಡುವೆಯೇ ಭಯೋತ್ಪಾದಕರು ಈ ದಾಳಿ ನಡೆಸಿದ್ದು, ಇದರಿಂದ ಗಣಿ ಮತ್ತು ಪೆಟ್ರೋಲಿಯಂ ಸಚಿವಾಲಯದ 5 ಸಿಬ್ಬಂದಿ ಮೃತಪಟ್ಟಿದ್ದಾರೆ. ಹಾಗೂ 10 ಮಂದಿ ಗಾಯಗೊಂಡಿದ್ದಾರೆ. ಹಾಗೆಯೇ ಎರಡನೇ ಬಾಂಬ್ ಸ್ಫೋಟದಲ್ಲಿ 7 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ತ್ರಿವಳಿ ಬಾಂಬ್ ತ್ರಿವಳಿ ಬಾಂಬ್ ಸ್ಫೋಟದ ಪರಿಣಾಮವಾಗಿ ಈವರೆಗೆ ಒಟ್ಟು 12 ಮಂದಿ ಬಲಿಯಾಗಿದ್ದಾರೆ. ಸ್ಪೋಟದ ತೀವ್ರತೆಗೆ ಮೃತರ ಸಂಖ್ಯೆ ಏರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಈ ಮೂರು ದಾಳಿಗಳಲ್ಲಿ ಒಂದು ದಾಳಿಯ ಹೊಣೆಯನ್ನು ಹೊತ್ತ ತಾಲಿಬಾನ್ ಉಗ್ರ ಸಂಘಟನೆ, ವಿದೇಶಿ ಪಡೆಗಳ ಮೇಲೆ ನಾವು ದಾಳಿ ನಡೆಸಲು ಬಾಂಬ್ ಸ್ಫೋಟಿಸಿದ್ದೇವೆ. ಉಳಿದ ಎರಡು ದಾಳಿಗೂ ನಮಗೂ ಸಂಬಂಧವಿಲ್ಲ ಎಂದು ತಿಳಿಸಿರುವುದಾಗಿ ಅಫ್ಘಾನ್ ಅಧ್ಯಕ್ಷರ ವಕ್ತಾರ ಸೇದಿಕ್ ಸಿದ್ದೀಕಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಈ ಘಟನೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದರೆ.