ಢಾಕಾ, ಫೆ. 13 (DaijiworldNews/AK): ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರದ ಪತನದ ನಂತರ ಮೊದಲ ಸಾರ್ವತ್ರಿಕ ಚುನಾವಣೆ ಯ ಫಲಿತಾಂಶ ಇಂದು ಹೊರಬೀಳಲಿದೆ. ಈಗಾಗಲೇ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ166 ಸ್ಥಾನಗಳಲ್ಲಿ ಗೆದ್ದು ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ಅಧಿಕೃತ ಫಲಿತಾಂಶ ಹೊರ ಬೀಳುವುದಕ್ಕೂ ಮುನ್ನವೇ ಬಿಎನ್ಪಿ ಗೆಲುವು ಘೋಷಿಸಿಕೊಂಡಿದೆ.

ಈ ಬೆನ್ನಲ್ಲೇ ಅತಿದೊಡ್ಡ ಇಸ್ಲಾಮಿಸ್ಟ್ ಪಕ್ಷವಾದ ಜಮಾತ್-ಇ-ಇಸ್ಲಾಮಿ, ಫಲಿತಾಂಶ ಪ್ರಕ್ರಿಯೆ ಸಮಗ್ರತೆಯ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದೆ. ಇನ್ನೂ ಬಾಂಗ್ಲಾದೇಶ ಚುನಾವಣೆಯಲ್ಲಿ ನಿರ್ಣಾಯಕ ಗೆಲುವು ಸಾಧಿಸಿದ ಬಿಎನ್ಪಿ ಪಕ್ಷದ ಮುಖ್ಯಸ್ಥ ತಾರಿಕ್ ರೆಹಮಾನ್ ಪ್ರಧಾನಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಅಂತಿಮ ಫಲಿತಾಂಶಗಳು ಹೊರಬಿದ್ದ ನಂತರ ಅವರು ಪ್ರಧಾನಿಯಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ.
ಈ ಮಧ್ಯೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ನಿರ್ಣಾಯಕ ಗೆಲುವಿಗಾಗಿ ರೆಹಮಾನ್ ಮತ್ತು ಬಿಎನ್ಪಿಗೆ ಎಕ್ಸ್ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಬಿಎನ್ಪಿಯನ್ನ ನಿರ್ಣಾಯಕ ಗೆಲುವಿನತ್ತ ಮುನ್ನಡೆಸಿದ್ದಕ್ಕಾಗಿ ತಾರಿಕ್ ರೆಹಮಾನ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಈ ಗೆಲುವು ಬಾಂಗ್ಲಾದೇಶದ ಜನರು ನಿಮ್ಮ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆಯನ್ನ ತೋರಿಸುತ್ತದೆ. ಭಾರತವು ಪ್ರಜಾಪ್ರಭುತ್ವ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶದ ಬೆಂಬಲದೊಂದಿಗೆ ಮುಂದುವರಿಯುತ್ತದೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಭಾರತವು ಪ್ರಜಾಪ್ರಭುತ್ವಕ್ಕೆ ಬೆಂಬಲವಾಗಿ ನಿಲ್ಲುವುದನ್ನ ಮುಂದುವರಿಸುತ್ತದೆ. ನಮ್ಮ ಬಹುಮುಖಿ ಸಂಬಂಧಗಳನ್ನ ಬಲಪಡಿಸಲು ಮತ್ತು ನಮ್ಮ ಸಾಮಾನ್ಯ ಅಭಿವೃದ್ಧಿ ಗುರಿಗಳನ್ನ ಮುನ್ನಡೆಸಲು ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ಟ್ರೆಂಡ್ ಪ್ರಕಾರ, ಬಿಎನ್ಪಿ 166 ಸ್ಥಾನಗಳನ್ನ ಗೆದ್ದಿದೆ, ಜಮಾತ್ ಮತ್ತು ಮಿತ್ರಪಕ್ಷಗಳು 52 ಸ್ಥಾನಗಳನ್ನ ಗೆದ್ದಿವೆ. ಇಸ್ಲಾಮಿ ಆಂದೋಲನ್ ಬಾಂಗ್ಲಾದೇಶ 1 ಸ್ಥಾನವನ್ನು ಗೆದ್ದಿದೆ, ಇತರರು 6 ಸ್ಥಾನ ಗೆದ್ದಿದ್ದಾರೆ. ಅಧಿಕೃತ ಫಲಿತಾಂಶ ಇನ್ನೂ ಬಾಕಿಯಿದೆ.