ಢಾಕಾ, ಫೆ. 16 (DaijiworldNews/AA): ಪರಸ್ಪರ ಲಾಭಕ್ಕಾಗಿ ಹೊಸ ಹೆಜ್ಜೆಗಳೊಂದಿಗೆ, ಹೊಸ ಸಂಬಂಧವನ್ನು ಆರಂಭಿಸಲು ನಾವು ತಯಾರಿದ್ದೇವೆ ಎಂದು ಬಿಎನ್ಪಿ ಮುಖ್ಯಸ್ಥ ತಾರಿಕ್ ರೆಹಮಾನ್ ಅವರ ಸಲಹೆಗಾರ ಹುಮಾಯೂನ್ ಕಬೀರ್ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಬಿಎನ್ಪಿಗೆ ಸಿಕ್ಕ ಅಭೂತಪೂರ್ವ ಗೆಲುವನ್ನು ಭಾರತ ಮನಗಾಣಬೇಕು. ದೇಶದ ಬದಲಾವಣೆಯನ್ನು ಸ್ವೀಕರಿಸಿ ಅದನ್ನು ಒಪ್ಪಿಕೊಳ್ಳುವುದು ಭಾರತದ ಹೊಣೆಗಾರಿಕೆ. ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಅವಾಮಿ ಲೀಗ್ ಮತ್ತು ಶೇಖ್ ಹಸೀನಾ ಇಂದಿನ ಬಾಂಗ್ಲಾದಲ್ಲಿ ಇಲ್ಲ. ಭಾರತವು ಇದನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಹೇಳಿದರು.
ಹಸೀನಾ ಅವರನ್ನು ಬಾಂಗ್ಲಾಕ್ಕೆ ವಾಪಸ್ ಕಳುಹಿಸಿಕೊಡುವ ವಿಚಾರವಾಗಿ ಮಾತನಾಡಿದ ಅವರು, "ನಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವಂಥ ಚಟುವಟಿಕೆಗಳಿಗೆ ಭಾರತವು ತನ್ನ ನೆಲದಲ್ಲಿ ಅವಕಾಶ ನೀಡಬಾರದು. ಇದು ಸಾಧ್ಯವಾಗದ ಹೊರತು, ಭಾರತ ದೊಂದಿಗೆ ಸಹಜವಾದ ರಾಜತಾಂತ್ರಿಕ ಸಹಕಾರ ಅಸಾಧ್ಯ" ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ತಾರಿಕ್ ಅವರನ್ನು ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ತಾರಿಕ್ ಅವರು ಮೊದಲು ದೇಶದ ಸಮೃದ್ಧಿ, ಆರ್ಥಿಕ ಭದ್ರತೆಗೆ ಕಡೆಗೆ ಒತ್ತು ನೀಡಲಿದ್ದಾರೆ. ಈ ಎಲ್ಲವೂ ಒಂದು ಹಂತಕ್ಕೆ ಬಂದ ನಂತರವೇ ಅವರು ವಿದೇಶ ಭೇಟಿ ಆರಂಭಿಸಲಿದ್ದಾರೆ" ಎಂದು ತಿಳಿಸಿದರು.