ಜೀಲಾಂಗ್, ಫೆ. 19 (DaijiworldNews/TA): ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದ ಜೀಲಾಂಗ್ ನಗರದ ಸಮೀಪದ ಕೊರಿಯೊ ಪ್ರದೇಶದಲ್ಲಿ ಭಾರತೀಯ ಮೂಲದ 22 ವರ್ಷದ ನರ್ಸ್ ಹರ್ಮನ್ ಪ್ರೀತ್ ಸಿಂಗ್ ಮೇಲೆ ಭೀಕರ ಜನಾಂಗೀಯ ದಾಳಿ ನಡೆದಿದೆ.

ಫೆಬ್ರವರಿ 17ರ ತಡರಾತ್ರಿ ಜಿಮ್ನಲ್ಲಿ ವ್ಯಾಯಾಮ ಮುಗಿಸಿ ಹೊರಬರುತ್ತಿದ್ದ ವೇಳೆ ಮೂವರು ವ್ಯಕ್ತಿಗಳ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಬಿಳಿ ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಹರ್ಮನ್ ಅವರನ್ನು “ಇಂಡಿಯನ್ ಡಾಗ್” ಎಂದು ನಿಂದಿಸುತ್ತಿರುವುದು ಕಾಣಿಸುತ್ತದೆ.
ದಾಳಿಯ ವೇಳೆ ಹರ್ಮನ್ ಅವರ ಮುಖಕ್ಕೆ ತಲೆಯಿಂದ ಜೋರಾಗಿ ಗುದ್ದಲಾಗಿದ್ದು, ಮೂಗಿಗೆ ತೀವ್ರ ಗಾಯವಾಗಿದೆ. ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಘಟನೆಯ ಬಳಿಕ ಹರ್ಮನ್ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದಾರೆ. “ನನಗೆ ಈಗ ಸುರಕ್ಷತೆಯ ಬಗ್ಗೆ ಭಯವಾಗುತ್ತಿದೆ. ಮತ್ತೆ ಜಿಮ್ಗೆ ಹೋಗಲು ಸಾಧ್ಯವೇ ಎಂಬುದು ಗೊತ್ತಿಲ್ಲ,” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆ ಕುಟುಂಬ ಸದಸ್ಯರಲ್ಲಿಯೂ ಆತಂಕ ಉಂಟುಮಾಡಿದೆ.
ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದವರ ಮೇಲೆ ನಡೆಯುತ್ತಿರುವ ದಾಳಿಗಳು ಅನಿವಾಸಿ ಭಾರತೀಯ ಸಮುದಾಯದಲ್ಲಿ ಆತಂಕ ಹೆಚ್ಚಿಸಿವೆ.
ಇದಕ್ಕೂ ಮೊದಲು ಡಿಸೆಂಬರ್ನಲ್ಲಿ ಸ್ಯಿಡ್ನಿ ನಗರದ ಪ್ರಸಿದ್ಧ ಬೊಂಡಿ ಬೀಚ್ನಲ್ಲಿ ಹನುಕ್ಕಾ ಹಬ್ಬದ ವೇಳೆ ನಡೆದ ಗುಂಡಿನ ದಾಳಿಯಲ್ಲಿ 15 ಮಂದಿ ಸಾವನ್ನಪ್ಪಿದ್ದರು. ತನಿಖೆಯಲ್ಲಿ ಈ ದಾಳಿಯ ಹಿಂದೆ ಸಜಿದ್ ಅಕ್ರಮ್ ಮತ್ತು ನವೀದ್ ಅಕ್ರಮ್ ಎಂಬ ತಂದೆ-ಮಗ ಜೋಡಿ ಇರುವುದಾಗಿ ತಿಳಿದುಬಂದಿತ್ತು. ಸಜಿದ್ ಅಕ್ರಮ್ ಮೂಲತಃ ಹೈದರಾಬಾದ್ ನಿವಾಸಿಯಾಗಿದ್ದು, ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತದಿಂದ ಪ್ರೇರಿತರಾಗಿ ದಾಳಿ ನಡೆಸಿದ್ದಾನೆ ಎಂಬ ಮಾಹಿತಿ ಹೊರಬಂದಿತ್ತು.
ಪ್ರಸ್ತುತ ಜೀಲಾಂಗ್ ಪೊಲೀಸರು ಹರ್ಮನ್ ಪ್ರೀತ್ ಸಿಂಗ್ ಮೇಲಿನ ದಾಳಿಯನ್ನು ಜನಾಂಗೀಯ ದ್ವೇಷದ ಅಪರಾಧವೆಂದು ಪರಿಗಣಿಸಿ ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.