ಲಂಡನ್, ಜು 31(Daijiworld News/MSP): ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಂಗ್ಫಿಷರ್ ಏರ್ಲೈನ್ಸ್ ಬ್ಯಾಂಕುಗಳಿಂದ ಪಡೆದ ಸುಮಾರು 9 ಸಾವಿರ ಕೋಟಿ ಬಾಕಿ ಉಳಿಸಿಕೊಂಡು ಬ್ರಿಟನ್ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ವಿಜಯ್ ಮಲ್ಯ, " ನಾನು ಉದ್ಯಮಿ ವಿ.ಜಿ ಸಿದ್ದಾರ್ಥ ಅವರೊಂದಿಗೆ ಪರೋಕ್ಷವಾಗಿ ಸಂಬಂಧ ಹೊಂದಿದ್ದೇನೆ. ಅವರೊಬ್ಬ ಒಳ್ಳೆ ವ್ಯಕ್ತಿ ಹಾಗೂ ಉತ್ತಮ ಉದ್ಯಮಿ. ಅವರ ಪತ್ರದಲ್ಲಿರೋ ಸಾರಾಂಶ ನೋಡಿ ನನ್ನ ಹೃದಯ ನುಚ್ಚುನಾರಾಯ್ತು. ಸರ್ಕಾರಿ ಏಜೆನ್ಸಿಗಳು ಹಾಗೂ ಬ್ಯಾಂಕ್ಗಳು ಎಂಥ ವ್ಯಕ್ತಿಯನ್ನಾದರೂ ಹತಾಶೆಗೆ ದೂಡಿಬಿಡುತ್ತವೆ. ನನ್ನನ್ನೇ ನೋಡಿ, ನಾನು ಸಂಪೂರ್ಣ ಸಾಲ ಮರುಪಾವತಿ ಮಾಡುತ್ತೇನೆ ಎಂದರೂ ನನಗೆ ಅದಕ್ಕೆ ಅವಕಾಶವನ್ನೇ ನೀಡುತ್ತಿಲ್ಲ ನೋಡಿ ಎಂದು ಹೇಳಿದ್ದಾರೆ.
ಆ ಬಳಿಕ ಮತ್ತೊಂದು ಟ್ವೀಟ್ ಮಾಡಿ, "ಪಶ್ಚಿಮ ರಾಷ್ಟ್ರಗಳಲ್ಲಿ ಸರ್ಕಾರ ಮತ್ತು ಬ್ಯಾಂಕ್ಗಳು ಸಾಲಗಾರರು ಮಾಡಿದ ಸಾಲ ತೀರಿಸುವಲ್ಲಿ ಸಹಾಯ ಮಾಡುತ್ತವೆ. ಆದ್ರೆ ನನ್ನ ವಿಚಾರದಲ್ಲಿ ಇದು ತದ್ವಿರುದ್ಧವಾಗಿದೆ. ನಾನು ಸಾಲ ತೀರಿಸಲು ಮಾಡಿದ ಪ್ರತಿ ಪ್ರಯತ್ನದಲ್ಲೂ ಸರ್ಕಾರ ಮತ್ತು ಬ್ಯಾಂಕ್ಗಳು ಅಡ್ಡ ಗೋಡೆಯಾಗಿ ನಿಂತಿದ್ದವು" ಎಂದಿದ್ದಾರೆ.