ಕೊಲಂಬೊ, ಆ 1 (Daijiworld News/MSP): ಪುರಾಣಗಳಲ್ಲಿ ಇರುವಂತೆ 5,000 ವರ್ಷಗಳ ಹಿಂದೆ ಪುಷ್ಪಕ ವಿಮಾನವನ್ನು ಚಾಲನೆ ಮಾಡಿದ ಲಂಕಾಧಿಪತಿ ರಾವಣ ವಿಶ್ವದ ಮೊದಲ ವಿಮಾನಚಾಲಕ ಎಂದು ಶ್ರೀಲಂಕಾ ಹೇಳಿಕೊಂಡಿದ್ದು, ಮಾತ್ರವಲ್ಲದೇ ಈ ಕುರಿತಾದ ಹೆಚ್ಚಿನ ಅಧ್ಯಯನಕ್ಕೆ ಆಸಕ್ತಿ ತೋರಿದೆ.
ಲಂಕಾಧಿಪತಿ ರಾವಣ ಅತೀ ಪ್ರತಿಭಾನ್ವಿತ ರಾಜನಾಗಿದ್ದ. ಆಗಸದಲ್ಲಿ ಹಾರಾಟ ನಡೆಸಿದ ಪ್ರಥಮ ವ್ಯಕ್ತಿಯಾಗಿದ್ದಾನೆ. ಆತ ಮೊದಲ ವಿಮಾನ ಚಾಲಕನಿದ್ದಂತೆ. ಈ ಕುರಿತಾಗಿ ವಿಸ್ತ್ರತ ಸಂಶೋಧನೆ ನಡೆಯಬೇಕಿದೆ. ಪ್ರಾಚೀನ ಕಾಲದಲ್ಲಿ ಹಾರಲು ರಾವಣ ಬಳಸಿದ ವಿಧಾನಗಳನ್ನು ಅರ್ಥಮಾಡಿಕೊಳ್ಳುವ ಅಧ್ಯಯನ ನಡೆಯಬೇಕಿದೆ ಎಂದು ಶ್ರೀಲಂಕಾ ನಾಗರಿಕ ವಿಮಾನಯಾನ ಸಂಸ್ಥೆಯ ಶಶಿ ದಾನತುಂಗೆ ಹೇಳಿದ್ದಾರೆ. ಇನ್ನೈದು ವರ್ಷಗಳಲ್ಲಿ ಇದನ್ನು ವಿಶ್ವದ ಮುಂದೆ ಪ್ರಸ್ತುತಪಡಿಸುತ್ತೇವೆ ಎಂದಿದ್ದಾರೆ.
ಬುಧವಾರ ಇತಿಹಾಸಕಾರರು, ಪುರಾತತ್ತ್ವಜ್ಞರು, ವಿಜ್ಞಾನಿಗಳು ಮತ್ತು ಭೂವಿಜ್ಞಾನಿಗಳನ್ನು ಒಳಗೊಂಡ ಸಮಾವೇಶ ಶ್ರೀಲಂಕಾದ ಅತಿದೊಡ್ಡದಾದ ಬಂಡಾರನಾಯ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಇಲ್ಲಿ ಈ ವಿಚಾರ ಚರ್ಚೆಗೆ ಬಂದಿತ್ತು.
ಇತ್ತೀಚೆಗೆ ಶ್ರೀಲಂಕಾವು ಪ್ರಾಚೀನ ರಾಜ ರಾವಣನ ಬಗ್ಗೆ ಅಧ್ಯಯನ ಮಾಡಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು, ಶ್ರೀಲಂಕಾ ಬಾಹ್ಯಾಕಾಶಕ್ಕೆ ಕಳುಹಿಸಿದ ಮೊದಲ ಮೊದಲ ಉಪಗ್ರಹಕ್ಕೂ "ರಾವಣ " ಎಂಬ ಹೆಸರನ್ನಿಟ್ಟಿತ್ತು. ಸೀತೆಯನ್ನು ಅಪಹರಣ ಮಾಡಿದ ಎನ್ನುವುದನ್ನು ಒಪ್ಪದೆ ರಾವಣನು ಕರುಣಾಮಯಿ ರಾಜ ಮತ್ತು ವಿದ್ವಾಂಸನೆಂದು ಶ್ರೀಲಂಕಾದ ಹಲವರು ನಂಬುತ್ತಾರೆ. ಕೆಲವು ಭಾರತೀಯ ಧರ್ಮಗ್ರಂಥಗಳು ಕೂಡ ಅವನನ್ನು "ಮಹಾ ಬ್ರಾಹ್ಮಣ" ಎಂದು ವರ್ಣಿಸುತ್ತವೆ.