ವಾಷಿಂಗ್ಟನ್, ಆ.02(Daijiworld News/SS): ಭಾರತ - ಪಾಕಿಸ್ತಾನ ಸಮ್ಮತಿಸಿದರೆ ಕಾಶ್ಮೀರ ವಿವಾದ ಬಗೆಹರಿಸಲು ತಾವು ಸಹಾಯ ಮಾಡಲು ಸಿದ್ದ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಪುನರುಚ್ಛರಿಸಿದ್ದಾರೆ.
ದಶಕಗಳ ಕಾಲದ ಕಾಶ್ಮೀರ ವಿವಾದ ಬಗೆಹರಿಸುವುದು ಭಾರತ ಮತ್ತು ಪಾಕಿಸ್ತಾನಕ್ಕೆ ಬಿಟ್ಟ ವಿಷಯವಾದರೂ ಕೂಡ ಎರಡೂ ರಾಷ್ಟ್ರಗಳು ಬಯಸಿದರೆ ತಾವು ಸಹಾಯ ಮಾಡಲು ಸಿದ್ದ. ಇಮ್ರಾನ್ ಖಾನ್ ಆಗಲಿ, ನರೇಂದ್ರ ಮೋದಿಯವರಾಗಲಿ ಇಬ್ಬರೂ ಅದ್ಬುತ ವ್ಯಕ್ತಿಗಳು. ಯಾರಾದರೂ ಮಧ್ಯೆ ಪ್ರವೇಶಿಸಿ ಅವರಿಬ್ಬರನ್ನು ಒಂದು ಮಾಡಿದರೆ ಎಷ್ಟು ಒಳ್ಳೆಯದು ಅಂತಾ ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಕಾಶ್ಮೀರ ವಿವಾದ ಬಗೆಹರಿಸುವ ಬಗ್ಗೆ ನಾನು ಪಾಕಿಸ್ತಾನ ಜೊತೆ ಮಾತನಾಡಿದ್ದೇನೆ. ಭಾರತದ ಜೊತೆ ಕೂಡ ಪ್ರಾಮಾಣಿಕವಾಗಿ ಮಾತನಾಡಿದ್ದೇನೆ. ಅವರು ಬಯಸಿದರೆ ಖಂಡಿತವಾಗಿಯೂ ಮಧ್ಯೆ ಪ್ರವೇಶಿಸುತ್ತೇನೆ ಎಂದು ಟ್ರಂಪ್ ಪುನರುಚ್ಛರಿಸಿದ್ದಾರೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೆಲ ದಿನಗಳ ಹಿಂದೆ ಅಮೆರಿಕಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಶ್ಮೀರ ವಿವಾದ ಬಗೆಹರಿಸಲು ತಾವು ಎರಡು ದೇಶಗಳ ಮಧ್ಯೆ ಮಧ್ಯಸ್ಥಿಕೆ ವಹಿಸಲು ಸಿದ್ದವಿರುವುದಾಗಿ ಹೇಳಿದ್ದ ಬಗ್ಗೆ ಟ್ರಂಪ್ ಉಲ್ಲೇಖಿಸಿದರು. ಆದರೆ ಟ್ರಂಪ್ ಅವರ ಈ ಪ್ರಸ್ತಾಪವನ್ನು ಪಾಕಿಸ್ತಾನ ಸ್ವೀಕರಿಸಿದರೆ ಭಾರತ ತಿರಸ್ಕರಿಸಿತ್ತು.