ಟೆಹ್ರಾನ್, ಮಾ. 01 (DaijiworldNews/TA): ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಯು.ಎಸ್ ಬೆಂಬಲದೊಂದಿಗೆ ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದರೆ, ಪ್ರತಿಯಾಗಿ ಇರಾನ್ ಕೂಡ ಅಮೆರಿಕದ ವಾಯುನೆಲೆಗಳ ಮೇಲೆ ಪ್ರತಿದಾಳಿ ನಡೆಸಿದೆ ಎಂಬ ವರದಿಗಳು ಬಂದಿವೆ. ಈ ಬೆಳವಣಿಗೆಗಳು “ಮೂರನೇ ವಿಶ್ವಯುದ್ಧ” ಆತಂಕವನ್ನೂ ಹುಟ್ಟಿಸಿವೆ.

ಈ ಸಂಘರ್ಷದ ಕೇಂದ್ರಬಿಂದುವಾಗಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಖಮೇನಿ ಯಾರು? ಅವರು ಇರಾನ್ನ ಅತ್ಯಂತ ಶಕ್ತಿಶಾಲಿ ನಾಯಕನಾದದ್ದು ಹೇಗೆ? ಅಮೆರಿಕಾ ಮತ್ತು ಇಸ್ರೇಲ್ ಅವರಿಗೆ ವಿರೋಧಿಯಾಗಿರುವುದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಯಾರು ಅಯತೊಲ್ಲಾ ಖಮೇನಿ? : ಅಯತೊಲ್ಲಾ ಸಯ್ಯಿದ್ ಅಲಿ ಹೊಸೈನಿ ಖಮೇನಿ ಏಪ್ರಿಲ್ 19, 1939ರಂದು ಇರಾನ್ನ ಮಶಾದ್ ನಗರದಲ್ಲಿ ಜನಿಸಿದರು. ಅವರು ಶಿಯಾ ಇಸ್ಲಾಮಿನ ಉನ್ನತ ಧಾರ್ಮಿಕ ವಿದ್ವಾಂಸರಾಗಿ ಗುರುತಿಸಿಕೊಂಡಿದ್ದಾರೆ. “ಅಯತೊಲ್ಲಾ” ಪದವಿ ಶಿಯಾ ಸಂಪ್ರದಾಯದಲ್ಲಿ ಉನ್ನತ ಧಾರ್ಮಿಕ ಸ್ಥಾನವನ್ನು ಸೂಚಿಸುತ್ತದೆ.
1989ರಿಂದ ಅವರು ಇರಾನ್ನ ಸರ್ವೋಚ್ಚ ನಾಯಕರಾಗಿ ಅಧಿಕಾರದಲ್ಲಿದ್ದಾರೆ. ಇರಾನ್ನ ರಾಜಕೀಯ, ಸೇನಾ ಮತ್ತು ಧಾರ್ಮಿಕ ವ್ಯವಸ್ಥೆಗಳ ಮೇಲಿನ ಅಂತಿಮ ಅಧಿಕಾರ ಅವರ ಕೈಯಲ್ಲಿತ್ತು. ಇದು ಇರಾನ್ ಇತಿಹಾಸದಲ್ಲಿಯೇ ಅತಿ ದೀರ್ಘ ನಾಯಕತ್ವಗಳಲ್ಲಿ ಒಂದಾಗಿದೆ.
ಬಾಲ್ಯ, ಶಿಕ್ಷಣ ಮತ್ತು ಕ್ರಾಂತಿ ಹಾದಿ : ಖಮೇನಿ ಬಡ ಕುಟುಂಬದಿಂದ ಬಂದವರು. ತಮ್ಮ ಪ್ರಾಥಮಿಕ ಧಾರ್ಮಿಕ ಶಿಕ್ಷಣವನ್ನು ಮಶ್ಹದ್ ಮತ್ತು ಕೋಮ್ ನಗರಗಳಲ್ಲಿ ಪಡೆದರು. ಪರ್ಷಿಯನ್ ಸಾಹಿತ್ಯ, ತತ್ವಶಾಸ್ತ್ರ ಹಾಗೂ ಇಸ್ಲಾಮಿಕ್ ಜ್ಯೂರಿಸ್ಪ್ರೂಡೆನ್ಸ್ (ಫಿಕ್ಹ್) ಅಧ್ಯಯನ ಮಾಡಿದರು. 1950ರ ದಶಕದಲ್ಲಿ ಅವರು ಇರಾನ್ ಕ್ರಾಂತಿಯ ನಾಯಕ ರುಹೊಲ್ಲಾ ಖೊಮೇನಿ ಅವರ ಶಿಷ್ಯರಾದರು. ಇದೇ ಅವರ ರಾಜಕೀಯ ಜೀವನದ ಪ್ರಮುಖ ತಿರುವಾಯಿತು. 1960–70ರ ದಶಕದಲ್ಲಿ ಅವರು ಶಾ ಮೊಹಮ್ಮದ್ ರೆಜಾ ಪಹ್ಲವಿ ಅವರ ಆಡಳಿತದ ವಿರುದ್ಧ ಹೋರಾಡಿದರು. ಹಲವಾರು ಬಾರಿ ಬಂಧನಕ್ಕೂ ಒಳಗಾದರು. 1979ರ ಇಸ್ಲಾಮಿಕ್ ಕ್ರಾಂತಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
ಅಧ್ಯಕ್ಷ ಸ್ಥಾನದಿಂದ ಸರ್ವೋಚ್ಚ ನಾಯಕತ್ವದವರೆಗೆ : ಕ್ರಾಂತಿಯ ನಂತರ ಖಮೇನಿ ಪ್ರಮುಖ ಧಾರ್ಮಿಕ ಹಾಗೂ ರಾಜಕೀಯ ಹುದ್ದೆಗಳನ್ನು ವಹಿಸಿದರು. 1981ರಲ್ಲಿ ಅವರು ಇರಾನ್ನ ಅಧ್ಯಕ್ಷರಾದರು. 1980–88ರ Iಇರಾನ್-ಇರಾಕ್ ಯುದ್ಧ ಸಮಯದಲ್ಲಿ ಅವರು ಆಡಳಿತದ ಪ್ರಮುಖ ಭಾಗವಾಗಿದ್ದರು. 1989ರಲ್ಲಿ ಅಯತೊಲ್ಲಾ ಖೊಮೇನಿ ನಿಧನರಾದ ಬಳಿಕ “ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್” ಖಮೇನಿಯನ್ನು ಸರ್ವೋಚ್ಚ ನಾಯಕರಾಗಿ ಆಯ್ಕೆ ಮಾಡಿತು. ಈ ಹುದ್ದೆ “ವೆಲಾಯತ್-ಎ-ಫಕೀಹ್” ಸಿದ್ಧಾಂತದ ಆಧಾರಿತವಾಗಿದ್ದು, ಅಧ್ಯಕ್ಷ, ಸಂಸತ್ ಮತ್ತು ನ್ಯಾಯಾಂಗಕ್ಕಿಂತ ಮೇಲ್ಮಟ್ಟದ ಅಧಿಕಾರವನ್ನು ಹೊಂದಿದೆ.
ಇಸ್ರೇಲ್ಗೆ ಖಮೇನಿ ವಿರೋಧಿಯಾಗಿರುವುದೇಕೆ? : ಖಮೇನಿ ಇಸ್ರೇಲ್ ಅಸ್ತಿತ್ವವನ್ನೇ ಪ್ರಶ್ನಿಸುವ ಕಠಿಣ ನಿಲುವು ಹೊಂದಿದ್ದವರು. ಅವರು ಪ್ಯಾಲೆಸ್ಟೈನ್ ಪರ ನಿಲುವು ಹೊಂದಿದ್ದು, ಹಮಾಸ್ ಮತ್ತು ಹೆಜ್ಬೊಲ್ಲಾ ಮುಂತಾದ ಗುಂಪುಗಳಿಗೆ ಬೆಂಬಲ ನೀಡುತ್ತಿದ್ದರು ಎಂದು ಇಸ್ರೇಲ್ ಆರೋಪಿಸಿದೆ.
2023ರ ಹಮಾಸ್ ದಾಳಿಯ ನಂತರ ಇರಾನ್–ಇಸ್ರೇಲ್ ನಡುವಿನ ಪರೋಕ್ಷ ಯುದ್ಧ ತೀವ್ರಗೊಂಡಿದ್ದು, ಇತ್ತೀಚೆಗೆ ನೇರ ದಾಳಿಗಳ ಮಟ್ಟಕ್ಕೂ ಏರಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಮೇನಿಯನ್ನು ಇಸ್ರೇಲ್ ಭದ್ರತೆಗೆ ಪ್ರಮುಖ ಬೆದರಿಕೆ ಎಂದು ಪರಿಗಣಿಸಿದ್ದರು.
ಅಮೆರಿಕಾ–ಇರಾನ್ ವೈಷಮ್ಯ : ಖಮೇನಿ ಅಮೆರಿಕವನ್ನು “ಮಹಾ ಸೈತಾನ” ಎಂದು ಕರೆಯುವ ಮೂಲಕ ಕಠಿಣ ನಿಲುವು ತಾಳಿದ್ದಾರೆ. ಇರಾನ್ನ ಅಣು ಉತ್ಪಾದನೆ ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿ ಅಭಿವೃದ್ಧಿ ಅಮೆರಿಕದೊಂದಿಗೆ ಸಂಘರ್ಷಕ್ಕೆ ಕಾರಣವಾಗಿದೆ. 2015ರ ಜಂಟಿ ಸಮಗ್ರ ಕ್ರಿಯಾ ಯೋಜನೆ (ಜೆಸಿಪಿಒಎ) ಒಪ್ಪಂದವನ್ನು ಖಮೇನಿ ಬೆಂಬಲಿಸಿದ್ದರೂ, ನಂತರದ ಅಮೆರಿಕಾ ಆಡಳಿತ ಅದರಿಂದ ಹಿಂದೆ ಸರಿಯಿತು. ಈ ಹಿನ್ನೆಲೆ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.
ಖಮೇನಿ ಅವರಿಗೆ ನಾಲ್ವರು ಪುತ್ರರು. ಮುಸ್ತಫಾ, ಮೊಜ್ತಬಾ, ಮಸೌದ್ ಮತ್ತು ಮೈಸಮ್, ಹಾಗೂ ಇಬ್ಬರು ಪುತ್ರಿಯರು ಬೋಶ್ರಾ ಮತ್ತು ಹೋಡಾ ಇದ್ದಾರೆ. ಮುಸ್ತಫಾ ತಮ್ಮ ತಂದೆಯೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಮೊಜ್ತಬಾ ಮತ್ತು ಮಸೌದ್ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪುತ್ರಿ ಹೋಡಾ ವಿನ್ಯಾಸ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಟೆಹ್ರಾನ್ನಲ್ಲಿ ಸ್ವಂತ ಕಾರ್ಯಾಲಯ ನಡೆಸುತ್ತಿದ್ದಾರೆ. ಹಿರಿಯ ಪುತ್ರಿ ಬೋಶ್ರಾ ಗೃಹಿಣಿಯಾಗಿದ್ದು, ಧಾರ್ಮಿಕ ವಲಯದ ಪ್ರಮುಖ ಕುಟುಂಬಕ್ಕೆ ವಿವಾಹವಾಗಿದ್ದಾರೆ.
ಇದೀಗ ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವನ್ನು ದೃಢಪಡಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ನ ಹೇಳಿಕೆಗಳ ನಂತರ, ಈಗ ಇರಾನ್ ಮಾಧ್ಯಮಗಳು ಕೂಡ ಅಮೆರಿಕ ಮತ್ತು ಇಸ್ರೇಲಿ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿವೆ ಜತೆಗೆ 40 ದಿನಗಳ ಶೋಕಾಚರಣೆಯನ್ನು ಘೋಷಿಸಿವೆ.
1989ರಲ್ಲಿ ಸರ್ವೋಚ್ಚ ನಾಯಕರಾಗಿ ಅಧಿಕಾರ ವಹಿಸಿಕೊಂಡ ಖಮೇನಿ, 2026ರವರೆಗೆ ಇರಾನ್ನ ರಾಜಕೀಯ ಮತ್ತು ಸೇನಾ ವ್ಯವಸ್ಥೆಯ ಮೇಲಿನ ಸಂಪೂರ್ಣ ನಿಯಂತ್ರಣ ಹೊಂದಿದ್ದರು. ಅವರ 37 ವರ್ಷಗಳ ಆಳ್ವಿಕೆಯಲ್ಲಿ ಸೇನೆ ಮತ್ತು ಇಸ್ಲಾಮಿಕ್ ಕ್ರಾಂತಿಕಾರಿ ರಕ್ಷಕ ಪಡೆಯಿಗೆ ಅಪಾರ ಅಧಿಕಾರ ನೀಡಲಾಗಿತ್ತು.
ಅಯತೊಲ್ಲಾ ಅಲಿ ಖಮೇನಿ ಕೇವಲ ಧಾರ್ಮಿಕ ನಾಯಕನಲ್ಲ, ಇರಾನ್ನ ರಾಜಕೀಯ ಮತ್ತು ಸೇನಾ ವ್ಯವಸ್ಥೆಯ ಮೇಲಿನ ಸಂಪೂರ್ಣ ನಿಯಂತ್ರಣ ಹೊಂದಿರುವ ಶಕ್ತಿಶಾಲಿ ವ್ಯಕ್ತಿ. ಅವರ ಅಮೆರಿಕಾ-ಇಸ್ರೇಲ್ ವಿರೋಧಿ ನಿಲುವು ಮತ್ತು ಇರಾನ್ನ ಅಣು, ಪ್ರಾಕ್ಸಿ ನೀತಿಗಳು ಪ್ರಸ್ತುತ ಯುದ್ಧದ ಕೇಂದ್ರವಾಗಿವೆ. ಮುಂದಿನ ದಿನಗಳಲ್ಲಿ ಈ ಸಂಘರ್ಷ ಯಾವ ದಿಕ್ಕಿಗೆ ಸಾಗುತ್ತದೆ ಎಂಬುದು ಜಾಗತಿಕ ರಾಜಕೀಯದ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.