ರಾಂಚಿ, ಮಾ. 21 (DaijiworldNews/AA): ಹಾರ್ಮುಜ್ ಜಲಸಂಧಿ ಬಳಿ ತೈಲ ಸಾಗಿಸುತ್ತಿದ್ದ ಹಡಗಿನಲ್ಲಿ ರಾಂಚಿಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರ ಮೃತದೇಹವನ್ನು ತಾಯ್ನಾಡಿಗೆ ತರಲು ಸಹಾಯ ಮಾಡುವಂತೆ ಕೇಂದ್ರ ಮತ್ತು ಜಾರ್ಖಂಡ್ ಸರ್ಕಾರಕ್ಕೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

ರಾಂಚಿ ಮೂಲದ ಕ್ಯಾಪ್ಟನ್ ರಾಕೇಶ್ ರಂಜನ್ ಮೃತ ವ್ಯಕ್ತಿ. ಫೆಬ್ರವರಿ 2 ರಂದು ಖಾಸಗಿ ಕಂಪನಿಯ ಒಡೆತನದ 'ASP ಅವನಾ- RPSL-MUM-172' ಹಡಗನ್ನು ಸೇರಿಕೊಂಡಿದ್ದರು. ಅವರು ಮಾರ್ಚ್ 18 ರಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಈ ಪ್ರದೇಶದಲ್ಲಿ ಹಡಗು ಸಂಚಾರ ಸ್ಥಗಿತಗೊಂಡ ನಂತರ, ಫೆಬ್ರವರಿ 28 ರಿಂದ ಹಾರ್ಮುಜ್ ಜಲಸಂಧಿಯಿಂದ ಸುಮಾರು 14 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಈ ಹಡಗು ಸಿಲುಕಿಹಾಕಿಕೊಂಡಿತ್ತು.
ನನ್ನ ಸಹೋದರನ ಮೃತದೇಹವನ್ನು ಆದಷ್ಟು ಬೇಗ ವಾಪಸ್ ತರಲು ಸಹಾಯ ಮಾಡುವಂತೆ ನಾನು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ವಿನಂತಿಸುತ್ತೇನೆ. ಕಂಪನಿಯು ಅವರ ಹಣಕಾಸಿನ ಬಾಕಿ ಬಿಡುಗಡೆ ಮಾಡುವಲ್ಲಿ ಯಾವುದೇ ಅಡೆತಡೆ ಆಗಬಾರದು. ಸರ್ಕಾರವು ಈ ವಿಷಯವನ್ನು ಮೇಲ್ವಿಚಾರಣೆ ಮಾಡಬೇಕು. ಮೃತದೇಹವನ್ನು ಮರಳಿ ತರಲು ಸಹಾಯ ಕೋರಿ ಸಿಎಂ ಸೊರೇನ್ ಮತ್ತು ರಾಂಚಿ ಸಂಸದ ಸಂಜಯ್ ಸೇಠ್ ಅವರಿಗೆ ಪತ್ರಗಳನ್ನು ಕಳುಹಿಸಲಾಗಿದೆ ಎಂದು ಅವರ ಹಿರಿಯ ಸಹೋದರ ಉಮೇಶ್ ಸಿಂಗ್ ತಿಳಿಸಿದ್ದಾರೆ.