ಬೊಗೋಟಾ, ಮಾ. 24 (DaijiworldNews/TA): ಕೊಲಂಬಿಯಾದಲ್ಲಿ ಭಾರೀ ವಿಮಾನ ದುರಂತವೊಂದು ಸಂಭವಿಸಿದ್ದು, ದೇಶದ ಮಿಲಿಟರಿಗೆ ದೊಡ್ಡ ಆಘಾತ ತಂದಿದೆ. ವಾಯುಪಡೆಯ ಹರ್ಕ್ಯುಲಸ್ C-130 ಮಿಲಿಟರಿ ವಿಮಾನವು ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿದೆ ಎಂದು ವರದಿಗಳು ತಿಳಿಸಿವೆ.

ಈ ವಿಮಾನದಲ್ಲಿ ಸುಮಾರು 110 ಸೈನಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದ್ದು, ದುರಂತದಲ್ಲಿ ಎಲ್ಲರೂ ಸಾವನ್ನಪ್ಪಿರುವ ಸಾಧ್ಯತೆ ವ್ಯಕ್ತವಾಗಿದೆ. ಆದರೆ, ಈ ಕುರಿತು ಕೊಲಂಬಿಯಾದ ಮಿಲಿಟರಿ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಸಾವಿನ ಸಂಖ್ಯೆಯನ್ನು ದೃಢಪಡಿಸಿಲ್ಲ.
ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ದೋಷವೇ ಅಥವಾ ಇತರ ಕಾರಣಗಳಿಂದ ಈ ಘಟನೆ ಸಂಭವಿಸಿತೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ. ಘಟನೆಯ ನಂತರ ರಕ್ಷಣಾ ಕಾರ್ಯಾಚರಣೆಗಳು ತಕ್ಷಣವೇ ಆರಂಭಗೊಂಡಿದ್ದು, ಅವಶೇಷಗಳ ಶೋಧ ಕಾರ್ಯ ನಡೆಯುತ್ತಿದೆ. ಈ ದುರಂತವು ದೇಶದಾದ್ಯಂತ ದುಃಖದ ವಾತಾವರಣ ಸೃಷ್ಟಿಸಿದೆ. ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆಯಿದೆ.