ನ್ಯೂಯಾರ್ಕ್, ಮಾ. 24 (DaijiworldNews/TA): ನ್ಯೂಯಾರ್ಕ್ನ ಲಾಗ್ವಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಏರ್ ಕೆನಡಾ ವಿಮಾನ ದುರಂತದಲ್ಲಿ ಅಚ್ಚರಿಯ ರೀತಿಯಲ್ಲಿ ಸಿಬ್ಬಂದಿಯೊಬ್ಬರು ಜೀವಂತ ಉಳಿದ ಘಟನೆ ಬೆಳಕಿಗೆ ಬಂದಿದೆ.

ಮಾಂಟ್ರಿಯಲ್ನಿಂದ ಹೊರಟು 72 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಕೆನಡಾ ಎಕ್ಸ್ಪ್ರೆಸ್ CRJ-900 ವಿಮಾನವು ಲ್ಯಾಂಡಿಂಗ್ ವೇಳೆ ರನ್ವೇ ಬಳಿ ನಿಂತಿದ್ದ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಪೈಲಟ್ ಹಾಗೂ ಸಹ-ಪೈಲಟ್ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಅಪಘಾತದ ತೀವ್ರತೆಗೆ ವಿಮಾನದಲ್ಲಿದ್ದ ಸಿಬ್ಬಂದಿಯೊಬ್ಬರು ಸುಮಾರು 330 ಅಡಿ ದೂರಕ್ಕೆ ಎಸೆಯಲ್ಪಟ್ಟರೂ, ಅವರು ಜಂಪ್ ಸೀಟ್ಗೆ ಕಟ್ಟಿಹಾಕಿದ ಸ್ಥಿತಿಯಲ್ಲೇ ಉಳಿದಿದ್ದು ಪವಾಡದಂತೆ ಬದುಕುಳಿದಿದ್ದಾರೆ. ಗಾಯಗೊಂಡ ಸಿಬ್ಬಂದಿಯನ್ನು ಸೋಲಾಂಜ್ ಟ್ರೆಂಬ್ಲೇ ಎಂದು ಗುರುತಿಸಲಾಗಿದ್ದು, ಅವರ ಕಾಲಿನಲ್ಲಿ ಮುರಿತಗಳಾಗಿದ್ದು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
“ಅವರು ಕೆಳಗೆ ಬಿದ್ದಾಗಲೂ ಸೀಟಿಗೆ ಕಟ್ಟಿಹಾಕಿದ ಸ್ಥಿತಿಯಲ್ಲೇ ಇದ್ದರು. ಇದು ಹೇಗೆ ಸಾಧ್ಯವಾಯಿತು ಎಂಬುದನ್ನು ನಾವು ಇನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ,” ಎಂದು ಅವರ ಮಗಳು ಸಾರಾ ಲೆಪಿನ್ ಹೇಳಿದ್ದಾರೆ.
ಮತ್ತೊಂದು ವಿಮಾನದಲ್ಲಿ ವಿಚಿತ್ರ ವಾಸನೆ ಕಂಡುಬಂದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಅಗ್ನಿಶಾಮಕ ವಾಹನ ರನ್ವೇಗೆ ಬಂದಿತ್ತು. ಇದೇ ವೇಳೆ ಲ್ಯಾಂಡಿಂಗ್ ಆಗುತ್ತಿದ್ದ ಏರ್ ಕೆನಡಾ ವಿಮಾನವು ಆ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಪ್ರಯಾಣಿಕರೊಬ್ಬರ ಪ್ರಕಾರ, ಲ್ಯಾಂಡಿಂಗ್ ಸಮಯದಲ್ಲಿ ವಿಮಾನದಲ್ಲಿ ಭಾರೀ ಅಸ್ಥಿರತೆ ಉಂಟಾಗಿ, ತಕ್ಷಣವೇ ಬ್ರೇಕ್ ಹಾಕಿದ ಬಳಿಕ ದೊಡ್ಡ ಸ್ಫೋಟದ ಶಬ್ದ ಕೇಳಿಬಂದಿತು.
ಈ ಅಪಘಾತದಲ್ಲಿ ಮೃತಪಟ್ಟ ಪೈಲಟ್ಗಳನ್ನು ಆಂಟೊಯಿನ್ ಫಾರೆಸ್ಟ್ ಮತ್ತು ಮೆಕೆಂಜಿ ಗುಂಥರ್ ಎಂದು ಗುರುತಿಸಲಾಗಿದೆ. ಇವರು ತಮ್ಮ ವೃತ್ತಿಜೀವನವನ್ನು ಇತ್ತೀಚೆಗೆ ಪ್ರಾರಂಭಿಸಿದ್ದ ಯುವ ಪೈಲಟ್ಗಳು ಎಂದು ಫೆಡರಲ್ ಏವಿಯೇಷನ್ ಆಡಳಿತಾಧಿಕಾರಿ ತಿಳಿಸಿದ್ದಾರೆ. ಈ ದುರಂತವು ವಿಮಾನಯಾನ ಸುರಕ್ಷತೆ ಕುರಿತಂತೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ತನಿಖೆ ಮುಂದುವರಿದಿದೆ.