ಪ್ಯಾರಿಸ್, ಆ.22(Daijiworld News/SS): ಕಾಶ್ಮೀರ ವಿಚಾರವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಹಾಗೂ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಫ್ರಾನ್ಸ್ ಸರ್ಕಾರ ಹೇಳಿದೆ.
ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ವಿಧಿ 370ನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಫ್ರಾನ್ಸ್ ಸರ್ಕಾರ ಈ ಕುರಿತು ತನ್ನ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ಜೊತೆ ಫೋನ್ನಲ್ಲಿ ನಡೆಸಿದ ಮಾತುಕತೆಯ ವೇಳೆ, ಫ್ರಾನ್ಸ್ನ ಯುರೋಪ್ ಮತ್ತು ವಿದೇಶ ವ್ಯವಹಾರಗಳ ಸಚಿವ ಜೀನ್-ಯವೆಸ್ ಲಿ ಡ್ರಿಯನ್ ಅವರು, ಕಾಶ್ಮೀರದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಉಭಯ ದೇಶಗಳು ತಮ್ಮ ದ್ವಿಪಕ್ಷೀಯ ಒಪ್ಪಂದಗಳ ಅಡಿಯಲ್ಲಿ ಈ ವಿವಾದವನ್ನು ಬಗೆಹರಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಮಾತ್ರವಲ್ಲ ಎರಡು ದೇಶಗಳ ನಡುವೆ ಸಂಯಮ ಕಾಪಾಡಿಕೊಳ್ಳುವಂತೆ, ಉದ್ವಿಗ್ನತೆಯನ್ನು ಕಡಿಮೆ ಮಾಡುವಂತೆ ಹಾಗೂ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವಂತೆ ಫ್ರಾನ್ಸ್ ಸರ್ಕಾರ ಭಾರತ ಮತ್ತು ಪಾಕಿಸ್ತಾನಗಳಿಗೆ ಫ್ರಾನ್ಸ್ ಕರೆ ನೀಡಿದೆ.