ಮನಮಾ,ಆ 25 (Daijiworld News/RD): ಪ್ರಧಾನಿ ಮೋದಿ ಇಂದು ಬ್ರಹೈನ್ ಪ್ರವಾಸದಲ್ಲಿದ್ದು, ಅಲ್ಲಿನ 200 ವರ್ಷಗಳ ಹಳೆಯ ಶ್ರೀಕೃಷ್ಣ ದೇವಾಲಯದ ಜಿರ್ಣೋದ್ಧಾರಕ್ಕೆ 4.2 ಮಿಲಿಯನ್ ಯುಎಸ್ ಡಾಲರ್(30.03 ಕೋಟಿ ರೂ.) ಘೋಷಿಸಿದ್ದು, ಇದರ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಬಹ್ರೈನ್ ನ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಈ ಶ್ರೀಕೃಷ್ಣ ದೇವಾಲಯವು ಕೂಡ ಒಂದು.
4.2 ಮಿಲಿಯನ್ ಯುಎಸ್ ಡಾಲರ್ ವೆಚ್ಚದಲ್ಲಿ ಈ ದೇವಸ್ಥಾನ ಮರು ಅಭಿವೃದ್ಧಿಗೊಳ್ಳಲಿದ್ದು, ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಈಗಾಗಲೇ ಅಳತೆ ಮಾಡಲಾಗಿದ್ದು, 16,500 ಚದರ ಅಡಿ ಭೂಮಿಯಲ್ಲಿ ನವೀಕರಣವಾಗಲಿದೆ. 45 ಸಾವಿರ ಚದರ ಅಡಿ ವಿಸ್ತೀರ್ಣದ ನಾಲ್ಕು ಅಂತಸ್ತಿನ ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತದೆ. ಜೊತೆಗೆ 30 ಮೀ. ಎತ್ತರದಲ್ಲಿ ದೇವಸ್ಥಾನ ನಿರ್ಮಾಣವಾಗಲಿದೆ. ಹೀಗಾಗಿ ದೇವಸ್ಥಾನ ಜೀರ್ಣೋದ್ಧಾರಗೊಂಡ ನಂತರ 200 ವರ್ಷ ಹಳೆಯ ದೇವಸ್ಥಾನದ ಪರಂಪರೆಯನ್ನು ಪ್ರತಿಬಿಂಬಿಸುವಂತೆ ರಚಿಸಲಾಗುತ್ತದೆ. ಹಿಂದೂ ವಿವಾಹ ಹಾಗೂ ಇತರೆ ಸಮಾರಂಭಗಳನ್ನು ಮಾಡಲು ಸಭಾಂಗಣದ ವ್ಯವಸ್ಥೆಯನ್ನೂ ಈ ದೇವಸ್ಥಾನದಲ್ಲಿ ಮಾಡಲಾಗುತ್ತಿದೆ. ಈ ಮೂಲಕ ಬಹ್ರೇನ್ನ್ನು ವಿವಾಹದ ತಾಣವಾಗಿ ಉತ್ತೇಜಿಸುವ ಮೂಲಕ ಪ್ರವಾಸೋದ್ಯಮವನ್ನು ಹೆಚ್ಚಿಸಲಾಗುತ್ತಿದೆ.
ಮೊದಲ ಬಾರಿ ಬಹ್ರೈನ್ ಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ಮನಾಮಾದಲ್ಲಿರುವ ಶ್ರೀನಾಥಜೀ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ, ಬಹ್ರೈನ್ ನ ಶ್ರೀನಾಥಜೀ ದೇವಸ್ಥಾನದಲ್ಲಿ ಉತ್ತಮ ರೀತಿಯಲ್ಲಿ ಸಮಯ ಕಳೆದೆ. ಕೊಲ್ಲಿ ರಾಷ್ಟ್ರಗಳಲ್ಲಿ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿರುವ ಇದು ಭಾರತ ಮತ್ತು ಬಹ್ರೈನ್ ಒಳ್ಳೆಯ ಬಾಂಧವ್ಯ ರೂಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. ದೇವಸ್ಥಾನಕ್ಕೆ ಬಂದ ಭಾರತೀಯರನ್ನು ಮೋದಿ ಮಾತನಾಡಿಸುವ ಮೂಲಕ ಕೆಲವು ಹೊತ್ತು ಕಳೆದರು.