ನ್ಯೂಯಾರ್ಕ್, ಮೇ. 22 (DaijiworldNews/TA): ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಭಾರಿ ಮಳೆಯ ಅಬ್ಬರ ಮುಂದುವರಿದಿದ್ದು, ಕೆಲವೇ ಗಂಟೆಗಳ ಸುರಿದ ಮಳೆಗೆ ನಗರದೆಲ್ಲೆಡೆ ಜಲಾವೃತ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ಮ್ಯಾನ್ಹ್ಯಾಟನ್, ಕ್ವೀನ್ಸ್, ಬ್ರೂಕ್ಲಿನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳು ಕೆರೆಯಂತಾಗಿ ಕಾಣಿಸಿಕೊಂಡಿವೆ. ನಗರದ ಪ್ರಮುಖ ಬೀದಿಗಳು ಹಾಗೂ ಸುರಂಗ ಮಾರ್ಗಗಳು ನೀರಿನಿಂದ ಮುಳುಗಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾರಿ ಮಳೆಯಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದು, ವಾಹನ ಸವಾರರು ನಿಧಾನಗತಿಯಲ್ಲಿ ಸಂಚರಿಸುವಂತಾಗಿದೆ. ಕೆಲವೆಡೆ ಸಾರ್ವಜನಿಕ ಸಾರಿಗೆ ಸೇವೆಗಳ ಮೇಲೂ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.
ಇನ್ನೂ ಶನಿವಾರ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ವಿಶೇಷವಾಗಿ ಪಶ್ಚಿಮ ನ್ಯೂಯಾರ್ಕ್ ಪ್ರದೇಶದಲ್ಲಿ ದಿನವಿಡೀ ನಿರಂತರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.