ವಾಷಿಂಗ್ಟನ್, ಮೇ. 25(DaijiworldNews/AK): ಪ್ರಧಾನಿ ಮೋದಿಯನ್ನು ತಮ್ಮ ಆಪ್ತ ಸ್ನೇಹಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆದಿದ್ದಾರೆ.

ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ತಾನು ಭಾರತವನ್ನು ಪ್ರೀತಿಸುವುದಾಗಿ ಹೇಳಿದರು. ಅಲ್ಲದೆ ಪ್ರಧಾನಿ ಮೋದಿಯ ದೊಡ್ಡ ಅಭಿಮಾನಿ ಎಂದು ಕರೆದುಕೊಂಡಿದ್ದಾರೆ. ಭಾರತವು ಅಮೆರಿಕದ ಮೇಲೆ ಶೇಕಡಾ 100 ರಷ್ಟು ಭರವಸೆ ಇಡಬಹುದು ಎಂದು ದ್ವಿಪಕ್ಷೀಯ ಬಾಂಧವ್ಯವನ್ನು ಪುನರುಚ್ಚರಿಸಿದ್ದಾರೆ.
ಸಂವಾದದಲ್ಲಿ ಮಾತನಾಡಿದ ಟ್ರಂಪ್, “ನಾನು ಭಾರತವನ್ನು ಪ್ರೀತಿಸುತ್ತೇನೆ. ಪ್ರಧಾನಿ ಮೋದಿ ಶ್ರೇಷ್ಠರು, ಅವರು ನನ್ನ ಅತ್ಯಂತ ಆಪ್ತ ಸ್ನೇಹಿತ. ನಾನು ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ” ಎಂದು ಹೆಮ್ಮೆಯಿಂದ ಹೇಳಿದರು.
ನಮ್ಮ ನಡುವೆ ಅದ್ಭುತ ಆರ್ಥಿಕತೆ, ದಾಖಲೆಯ ಷೇರು ಮಾರುಕಟ್ಟೆ ಹಾಗೂ ಭಾರತಕ್ಕೆ ಬೇಕಾದ ಎಲ್ಲವೂ ಇದೆ. ಭಾರತ ಏನನ್ನಾದರೂ ಪಡೆಯಲು ಬಯಸಿದರೆ ನೇರವಾಗಿ ಇಲ್ಲಿಗೇ ಕರೆ ಮಾಡಬಹುದು ಎಂದು ಭಾರತದ ಮೇಲಿನ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು.
ಇದೇ ವೇಳೆ ಅವರು ಭಾರತ ಪ್ರವಾಸದಲ್ಲಿರುವ ತಮ್ಮ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ವಿದೇಶಾಂಗ ಕಾರ್ಯದರ್ಶಿ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರು, ಭಾರತ-ಯುಎಸ್ ಬಾಂಧವ್ಯವು ಹೊಸ ಯುಗದ ಅಡಿಪಾಯವಾಗಿದೆ ಎಂದರು.ಅಮೆರಿಕ ಮೊದಲು ಎಂದರೆ ಅಮೆರಿಕ ಮಾತ್ರ ಎಂದಲ್ಲ ಎಂದು ಸ್ಪಷ್ಟಪಡಿಸಿದ ಅವರು, ಟ್ರಂಪ್ ತಮ್ಮೊಂದಿಗೆ ಮಾತನಾಡುವ ಪ್ರತಿ ಬಾರಿಯೂ ಮೊದಲು ‘ನನ್ನ ಸ್ನೇಹಿತ ಪ್ರಧಾನಿ ಮೋದಿ ಹೇಗಿದ್ದಾರೆ? ಎಂದು ಕೇಳುತ್ತಾರೆ ಎಂದು ನೆನಪಿಸಿಕೊಂಡರು. ಐದು ತಿಂಗಳ ಹಿಂದಷ್ಟೇ ತಾವು ಭಾರತಕ್ಕೆ ಬಂದ ನಂತರ ಪ್ರಮುಖ ‘ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟನ್ನು ಸಿದ್ಧಪಡಿಸಲಾಗಿದ್ದು, ಮುಂದಿನ ಕೆಲವು ವಾರಗಳಲ್ಲಿ ಅದಕ್ಕೆ ಸಹಿ ಬೀಳಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.