ಇಸ್ಲಾಮಾಬಾದ್, ಆ.28(Daijiworld News/SS): ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ತೆಗೆದುಹಾಕಿರುವ ಹಿನ್ನಲೆಯಲ್ಲಿ, ಭಾರತೀಯ ವಿಮಾನಗಳು ತನ್ನ ವಾಯುಮಾರ್ಗವನ್ನು ಬಳಸುವುದಕ್ಕೆ ಸಂಪೂರ್ಣ ನಿಷೇಧ ಹೇರಲು ಪಾಕಿಸ್ತಾನ ಸರ್ಕಾರ ಚಿಂತಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್ ನಲ್ಲಿ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಶಿಬಿರ ತಾಣದ ಮೇಲೆ ಭಾರತೀಯ ಯುದ್ಧ ವಿಮಾನ ವಾಯುದಾಳಿ ನಡೆಸಿದ ಬಳಿಕ ಫೆಬ್ರವರಿ 26ರಂದು ಪಾಕಿಸ್ತಾನ ಭಾರತಕ್ಕೆ ತನ್ನ ವಾಯುಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿತ್ತು. ನಂತರ ಕಳೆದ ಜುಲೈ 16ರಂದು ಎಲ್ಲಾ ನಾಗರಿಕ ವಿಮಾನಗಳ ಸಂಚಾರಕ್ಕೆ ತನ್ನ ವಾಯುನೆಲೆಯನ್ನು ಪಾಕಿಸ್ತಾನ ತೆರೆದಿತ್ತು. ಇದೀಗ ಮತ್ತೆ ತನ್ನ ವಾಯುಮಾರ್ಗವನ್ನು ಬಳಸುವುದಕ್ಕೆ ಸಂಪೂರ್ಣ ನಿಷೇಧ ಹೇರಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಫವದ್ ಚೌಧರಿಈ ಕುರಿತು ಮಾತನಾಡಿ, ಭಾರತ-ಆಫ್ಘನ್ ನಡುವೆ ವ್ಯಾಪಾರ ಉದ್ಯಮಕ್ಕೆ ಬಳಸುತ್ತಿರುವ ಪಾಕಿಸ್ತಾನ ಭೂ ಮಾರ್ಗ ಸಂಚಾರಕ್ಕೂ ನಿಷೇಧ ಹೇರಲು ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಕುರಿತು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರುಗಳಿಂದ ಸಹ ಅಭಿಪ್ರಾಯಗಳು ಬಂದಿದ್ದು ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಇರುವ ಕಾನೂನು ವಿಚಾರಗಳನ್ನು ಪರಿಗಣಿಸಲಾಗುತ್ತಿದೆ. ಭಾರತಕ್ಕೆ ಪಾಕಿಸ್ತಾನದ ವಾಯುಮಾರ್ಗವನ್ನು ಮತ್ತು ಆಫ್ಘಾನಿಸ್ತಾನದೊಂದಿಗೆ ಭಾರತದ ವ್ಯಾಪಾರಕ್ಕೆ ಬಳಸುತ್ತಿರುವ ಭೂ ಮಾರ್ಗಕ್ಕೆ ಸಹ ಸಂಪೂರ್ಣ ನಿರ್ಬಂಧ ಹೇರಲು ಪ್ರಧಾನಿ ಯೋಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.