ಜೆರುಸಲೇಂ, ಜೂ. 15 (DaijiworldNews/AA): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ನಡೆದಿರುವ ಶಾಂತಿ ಒಪ್ಪಂದವು ಇಸ್ರೇಲ್ ಅನ್ನು ಯಾವುದೇ ರೀತಿಯಲ್ಲೂ ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಸಚಿವ ಇತಾಮರ್ ಬೆನ್-ಗ್ವಿರ್ ತಿಳಿಸಿದ್ದಾರೆ.

"ಟ್ರಂಪ್ ಅವರ ಒಪ್ಪಂದ ನಮಗೆ ಅನ್ವಯಿಸುವುದಿಲ್ಲ. ಇಸ್ರೇಲ್ ದೇಶವು ಅಮೆರಿಕದ ಅಧೀನದಲ್ಲಿಲ್ಲ. ನಮ್ಮದು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರ! ನಮಗೆ ಅಮೆರಿಕದ ಮೇಲೆ ಅಪಾರ ಪ್ರೀತಿ ಇದೆ ಮತ್ತು ಅಧ್ಯಕ್ಷ ಟ್ರಂಪ್ ಅವರಿಗೆ ನಾವು ಕೃತಜ್ಞರಾಗಿದ್ದೇವೆ. ಹಾಗಂತ ಇಸ್ರೇಲ್ ದೇಶವೇನೂ ಯಾವುದೇ ದುರ್ಬಲ ದೇಶವಲ್ಲ" ಎಂದಿದ್ದಾರೆ.
"ವಿದೇಶಿ ಒತ್ತಡಗಳಿಗೆ ಮಣಿಯುವುದು ಇಸ್ರೇಲ್ನ ಭದ್ರತೆಗೆ ಮಾರಕ ಎಂಬುದನ್ನು ಇತಿಹಾಸ ಸಾಬೀತುಪಡಿಸಿದೆ. ಹಿಂದೆಲ್ಲಾ ನಾವು ಇಸ್ರೇಲ್ನ ಭದ್ರತೆಯನ್ನು ಪಣಕ್ಕಿಟ್ಟು ಅಂತಾರಾಷ್ಟ್ರೀಯ ಒತ್ತಡಗಳಿಗೆ ತಲೆಬಾಗಿದಾಗಲೆಲ್ಲಾ, ನಾವು ರಕ್ತದ ಮೂಲಕ ಭಾರಿ ಬೆಲೆ ತೆರಬೇಕಾಗಿ ಬಂದಿದೆ" ಎಂದು ಹೇಳಿದರು.
"ಲೆಬನಾನ್ನಲ್ಲಿ ಇರಾನ್ ಬೆಂಬಲಿತ ಹೆಜ್ಬುಲ್ಲಾ ಉಗ್ರಗಾಮಿ ಸಂಘಟನೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವವರೆಗೂ ಯಾವುದೇ ತರಹದ ರಾಜಿ ಮಾಡಿಕೊಳ್ಳುವುದಿಲ್ಲ. ಯುದ್ಧದ ಸಮಯದಲ್ಲಿ ವಶಪಡಿಸಿಕೊಂಡಿರುವ ಲೆಬನಾನ್ ಭೂಭಾಗದಿಂದ ಇಸ್ರೇಲಿ ಪಡೆಗಳು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಎಂದು ವಿವರಿಸಿದ್ದಾರೆ.
"ಇಸ್ರೇಲ್ನ ಉತ್ತರದ ಗಡಿ ಗ್ರಾಮಗಳ ಬಳಿ ಮತ್ತೆ ಉಗ್ರರು ಬಂದು ನೆಲೆಸುವುದನ್ನು ಸಹಿಸುವುದಿಲ್ಲ. ಲೆಬನಾನ್ನಿಂದ ಇಸ್ರೇಲ್ ಕಡೆಗೆ ಒಂದೇ ಒಂದು ಡ್ರೋನ್ ಅಥವಾ ಕ್ಷಿಪಣಿ ಹಾರಿಬಂದರೂ, ಅದಕ್ಕೆ ಪ್ರತಿಯಾಗಿ ಲೆಬನಾನ್ನ ರಾಜಧಾನಿ ಬೈರೂತ್ನ ಹೆಜ್ಬುಲ್ಲಾ ಭದ್ರಕೋಟೆಯಾದ ದಹಿಯಾ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಲಿದೆ. ಈ ಹಿಂದೆ ಇದ್ದ ಅದೇ ಆಕ್ರಮಣಕಾರಿ ಶೈಲಿಯನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.