ಕ್ಯಾಲಿಫೋರ್ನಿಯಾ, ಜೂ. 16 (DaijiworldNews/AA): ಅಮೆರಿಕ ವಾಯುಪಡೆಯ ಶಕ್ತಿಶಾಲಿ 'ಬಿ-52 ಸ್ಟ್ರಾಟೊಫೋರ್ಟ್ರೆಸ್' ಬಾಂಬರ್ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ 8 ಮಂದಿ ಸಾವನ್ನಪ್ಪಿರುವ ಘಟನೆ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿರುವ ಎಡ್ವರ್ಡ್ಸ್ ವಾಯುಪಡೆ ನೆಲೆಯಲ್ಲಿ ಸಂಭವಿಸಿದೆ.

ಯುಎಸ್ ವಾಯುಪಡೆಗೆ ಸೇರಿದ ಪ್ರಸಿದ್ಧ 'ಬಿ-52 ಸ್ಟ್ರಾಟೊಫೋರ್ಟ್ರೆಸ್' ಬಾಂಬರ್ ವಿಮಾನವು ಸೋಮವಾರ ಬೆಳಗ್ಗೆ 11:20 ರ ಸುಮಾರಿಗೆ ರನ್ವೇಯಿಂದ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಅಪಘಾತದ ಬೆನ್ನಲ್ಲೇ ಸ್ಥಳದಲ್ಲಿ ಭಾರೀ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿದೆ.
ವಿಮಾನವು ಪತನಗೊಂಡ ತಕ್ಷಣ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದರಿಂದ ವಿಮಾನ ಸಂಪೂರ್ಣವಾಗಿ ನಾಶವಾಗಿದೆ. ವಿಮಾನದಲ್ಲಿದ್ದ ಮಿಲಿಟರಿ ಸಿಬ್ಬಂದಿ ಮತ್ತು ಸರ್ಕಾರಿ ಗುತ್ತಿಗೆದಾರರು ಸೇರಿದಂತೆ ಎಂಟು ಮಂದಿಯೂ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ನಿತ್ಯ ಪರೀಕ್ಷಾ ಕಾರ್ಯಾಚರಣೆಗಾಗಿ 8 ಜನರನ್ನ ಈ ವಿಮಾನ ಹೊತ್ತೊಯ್ಯುತ್ತಿತ್ತು. ಈ ಅಪಘಾತದಲ್ಲಿ ಬದುಕುಳಿಯುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಎಡ್ವರ್ಡ್ಸ್ ನೆಲೆಯ ವಾಯುಪಡೆ ತಿಳಿಸಿದೆ.
ಘಟನೆ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ತುರ್ತು ಕಾರ್ಯಾಚರಣೆ ಕೈಗೊಂಡಿದ್ದಾರೆ. ತಾತ್ಕಾಲಿಕವಾಗಿ ವಿಮಾನ ನಿಲ್ದಾಣವನ್ನ ಬಂದ್ ಮಾಡಲಾಗಿದೆ. ಅಲ್ಲದೇ ಈ ಮಾರ್ಗದಲ್ಲಿ ಬರುವ ಎಲ್ಲಾ ವಿಮಾನಗಳನ್ನ ಬೇರೆಡೆಗೆ ತಿರುಗಿಸಲಾಗಿದೆ ಎಂದು ತಿಳಿದುಬಂದಿದೆ.
ಅಪಘಾತಕ್ಕೀಡಾದ ವಿಮಾನವು ಹಳೆಯ ರಾಡಾರ್ ವ್ಯವಸ್ಥೆಯನ್ನು ಬದಲಾಯಿಸಿ, ಅತ್ಯಾಧುನಿಕ 'ಎಇಎಸ್ಎ' ರಾಡಾರ್ ವ್ಯವಸ್ಥೆಯನ್ನು ಅಳವಡಿಸುವ ಮಿಲಿಟರಿ ಆಧುನೀಕರಣ ಪರೀಕ್ಷಾರ್ಥ ಹಾರಾಟದಲ್ಲಿ ಭಾಗಿಯಾಗಿತ್ತು. ಅಪಘಾತದ ನಿಖರ ಕಾರಣ ತಿಳಿಯಲು ಸುಮಾರು ಆರು ತಿಂಗಳು ಬೇಕಾಗಬಹುದು ಎಂದು ವಾಯುಸೇನೆಯ ಉಪ ಕಮಾಂಡರ್ ಮಾಹಿತಿ ನೀಡಿದ್ದಾರೆ.