ಪ್ಯಾರಿಸ್, ಜೂ. 17 (DaijiworldNews/AK): ಫ್ರಾನ್ಸ್ನ ಏವಿಯನ್-ಲೆ-ಬೈನ್ಸ್ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಿ, ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ. ಸುಮಾರು 16 ತಿಂಗಳ ಬಳಿಕ ಉಭಯ ನಾಯಕರು ನೇರ ಮುಖಾಮುಖಿಯಾಗಿ ಮಾತುಕತೆ ನಡೆಸಿದರು.

ಬಳಿಕ ಶೃಂಗದಲ್ಲಿ ʻಹೊಸ ಪಾಲುದಾರಿಕೆ ರೂಪಿಸುವುದು ಮತ್ತು ಅಂತಾರಾಷ್ಟ್ರೀಯ ಒಗ್ಗಟ್ಟಿನ ಪುನರ್ನಿರ್ಮಾಣʼ ಕುರಿತಾಗಿ ಅಧಿವೇಶನ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಈ ವೇಳೆ ಅಮೆರಿಕದ ಮಿಲಿಟರಿ ದಾಳಿಯಲ್ಲಿ ಇತ್ತೀಚೆಗೆ ಸಾವನ್ನಪ್ಪಿದ ಭಾರತೀಯ ನಾವಿಕರ ವಿಷಯ ಪ್ರಸ್ತಾಪಿಸಿದರು. ಟ್ರಂಪ್ ಸಮ್ಮುಖದಲ್ಲೇ ಭಾರತೀಯ ನಾವಿಕರ ಸುರಕ್ಷತೆ ಬಗ್ಗೆ ದನಿ ಎತ್ತಿದರು.
ಅಮೆರಿಕ-ಇರಾನ್ ಸಂಘರ್ಷವು ಆ ಪ್ರದೇಶದಲ್ಲಿರುವ ದೇಶಗಳ ಮೇಲೆ ಗಮನಾರ್ಹ ಮಾನವ ಮತ್ತು ಆರ್ಥಿಕ ನಷ್ಟವನ್ನ ಉಂಟು ಮಾಡಿದೆ ಎಂದು ಹೇಳಿದರು. ಸದ್ಯ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಒಪ್ಪಂದದಲ್ಲಿ ಪ್ರಗತಿಯನ್ನ ನಾವು ಸ್ವಾಗತಿಸುತ್ತೇವೆ. ಆದರೆ ಕಳೆದ ಕೆಲ ದಿನಗಳಲ್ಲಿ ನಮ್ಮ ಮಿತ್ರ ರಾಷ್ಟ್ರಗಳಲ್ಲಿ ಜೀವ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ ಈ ಸಂಘರ್ಷ ಕಾರಣವಾಗಿದೆ. ಹಾರ್ಮಜ್ ಜಲಸಂಧಿಯ ನಿರ್ಬಂಧದಿಂದ ಸಮುದ್ರ ವ್ಯಾಪಾರಕ್ಕೆ ಉಂಟಾದ ಅಡ್ಡಿಯು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಹಲವಾರು ಭಾರತೀಯರೂ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗಮನ ಸೆಳೆದರು.