ಜಿನೀವಾ, ಜೂ. 18 (DaijiworldNews/TA): ಭಾರತೀಯ ಸಂಸ್ಕೃತಿ ಹಾಗೂ ಶಾಸ್ತ್ರೀಯ ಕಲೆಯ ವೈಭವವನ್ನು ಜಾಗತಿಕ ವೇದಿಕೆಯಲ್ಲಿ ಅನಾವರಣಗೊಳಿಸುವ ಅಪೂರ್ವ ಪ್ರಯತ್ನವಾಗಿ ಕರ್ನಾಟಕ ಕಲಾಶ್ರೀ ಡಾ. ಸತ್ಯನಾರಾಯಣ ರಾಜು ಅವರ ‘ರಾಮಕಥೆ’ ಭರತನಾಟ್ಯ ನೃತ್ಯರೂಪಕವು ಸ್ವಿಟ್ಜರ್ಲೆಂಡ್ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಮೇ ತಿಂಗಳಲ್ಲಿ ಜಿನೀವಾ ಹಾಗೂ ಜ್ಯೂರಿಚ್ ನಗರಗಳಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಮಾಯಣದ ಕಥಾನಕವನ್ನು ಭರತನಾಟ್ಯದ ಮೂಲಕ ಮನೋಜ್ಞವಾಗಿ ಕಟ್ಟಿಕೊಟ್ಟ ಡಾ. ಸತ್ಯನಾರಾಯಣ ರಾಜು ಅವರು, ಶ್ರೀರಾಮನ ಆದರ್ಶ ಜೀವನ ಮತ್ತು ಮೌಲ್ಯಗಳನ್ನು ನೃತ್ಯಾಭಿನಯದ ಮೂಲಕ ಪರಿಣಾಮಕಾರಿಯಾಗಿ ಮೂಡಿಸಿದರು. ಅವರ ಅಭಿವ್ಯಕ್ತಿಶೀಲ ನಿರೂಪಣೆ ಹಾಗೂ ತಾಂತ್ರಿಕ ಪ್ರೌಢಿಮೆಗೆ ಸ್ವಿಸ್ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವು ಭಾಷೆ ಮತ್ತು ಸಂಸ್ಕೃತಿಯ ಗಡಿಗಳನ್ನು ಮೀರಿ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ತಲುಪಿದ್ದು, ಮಕ್ಕಳು ಸೇರಿದಂತೆ ವಿವಿಧ ವಯೋಮಾನದ ಪ್ರೇಕ್ಷಕರು ಆಸಕ್ತಿಯಿಂದ ವೀಕ್ಷಿಸಿದರು. ಡಾ. ಉಷಾ ಆರ್.ಕೆ. ಅವರ ಪರಿಕಲ್ಪನೆಯಲ್ಲಿ ರೂಪುಗೊಂಡ ‘ರಾಮಕಥೆ’ಗೆ ಡಿ.ಎಸ್. ಶ್ರೀವತ್ಸ, ಎಸ್.ವಿ. ಬಾಲಕೃಷ್ಣ, ರಘುನಂದನ್ ರಾಮಕೃಷ್ಣ ಹಾಗೂ ಗೋಪಾಲ್ ಅವರ ಸಂಗೀತ ಸಂಯೋಜನೆ ಮೆರುಗು ನೀಡಿತು.
ಓಂಕಾರ ನೃತ್ಯ ಜಿನೀವಾ ಹಾಗೂ ಸ್ವಿಸ್ ಇಂಡಿಯನ್ ಫೈನ್ ಆರ್ಟ್ಸ್ ಅಸೋಸಿಯೇಷನ್ (SIFAA) ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ಸುಜಾತಾ ವೆಂಕಟೇಶ್ ಹಾಗೂ ವೆಂಕಟೇಶ್ ಅವರ ಸಂಘಟನಾ ಶ್ರಮ ಪ್ರಮುಖ ಕಾರಣವಾಗಿತ್ತು. ರಾಮಾಯಣದ ಮೂಲಕ ಸದಾಚಾರ, ಭಕ್ತಿ, ಧೈರ್ಯ ಹಾಗೂ ಕರುಣೆಯಂತಹ ಸಾರ್ವತ್ರಿಕ ಮೌಲ್ಯಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ‘ರಾಮಕಥೆ’ ಯಶಸ್ವಿಯಾಗಿದ್ದು, ಭಾರತೀಯ ಶಾಸ್ತ್ರೀಯ ನೃತ್ಯದ ಶಕ್ತಿ ಮತ್ತು ಪ್ರಸ್ತುತತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಸಾಧನೆ ಭಾರತೀಯ ಕಲಾ ಪರಂಪರೆಗೆ ಹಾಗೂ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.