ಟೆಹ್ರಾನ್, ಜೂ. 19 (DaijiworldNews/AA): ಈ ಒಪ್ಪಂದಕ್ಕೆ ಇರಾನ್ನ ಉತ್ಸಾಹ ಕಾರಣವಲ್ಲ, ಬದಲಿಗೆ ಯುದ್ಧ ಮುಗಿಸಲೇಬೇಕಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತಾಶೆಯೇ ಕಾರಣ ಎಂದು ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ತಿಳಿಸಿದ್ದಾರೆ.

ಇರಾನ್ ಮತ್ತು ಅಮೆರಿಕ ಜಂಟಿಯಾಗಿ ಇಸ್ಲಾಮಾಬಾದ್ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಅವರು ದೃಢಪಡಿಸಿದ್ದಾರೆ. ಸದ್ಯಕ್ಕೆ ಇದು ಮಧ್ಯಂತರ ಒಪ್ಪಂದವಾಗಿದ್ದು, ಪೂರ್ಣ ಪ್ರಮಾಣದ ಸಮಗ್ರ ಅಂತಿಮ ಒಪ್ಪಂದವನ್ನು ಸಿದ್ಧಪಡಿಸಲು ಉಭಯ ದೇಶಗಳಿಗೆ 60 ದಿನಗಳ ಕಾಲಾವಕಾಶ ದೊರೆತಿದೆ.
ವರ್ಸೈಲ್ಸ್ ಅರಮನೆಯಲ್ಲಿ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿದ್ದ ಜಿ7 ಶೃಂಗಸಭೆಯ ಔತಣಕೂಟದ ವೇಳೆ ಈ ಒಪ್ಪಂದದ ಸಿದ್ಧತೆ ನಡೆದಿದೆ. ಇಂದು ಸ್ವಿಟ್ಜರ್ಲ್ಯಾಂಡ್ನ ಜಿನೀವಾದಲ್ಲಿ ಇದಕ್ಕೆ ಔಪಚಾರಿಕವಾಗಿ ಸಹಿ ಹಾಕಲಾಗುತ್ತದೆ.
ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆ ಹಾಗೂ ಯುದ್ಧವನ್ನು ತಕ್ಷಣದಿಂದಲೇ ಶಾಶ್ವತವಾಗಿ ನಿಲ್ಲಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ. ಅಮೆರಿಕವು ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು 30 ದಿನಗಳ ಒಳಗಾಗಿ ಹಿಂಪಡೆಯಬೇಕಾಗುತ್ತದೆ. ಇದರಿಂದ ಜಾಗತಿಕ ಹಡಗು ಸಂಚಾರ ಮೊದಲಿನ ಸ್ಥಿತಿಗೆ ಮರಳಲಿದೆ.
ಇದು ವಿಶ್ವದಲ್ಲಿ ಶಾಶ್ವತ ಶಾಂತಿಗೆ ದಾರಿ ಮಾಡಿಕೊಡಲಿದೆ. ಜಾಗತಿಕ ವ್ಯಾಪಾರಕ್ಕೆ ದೊಡ್ಡ ನಿರಾಳ ತರಲಿದೆ ಎಂದು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಈ ಒಪ್ಪಂದವನ್ನು ಜಗತ್ತಿಗೆ ಪ್ರಕಟಿಸಿದ್ದಾರೆ.