ನ್ಯೂಯಾರ್ಕ್, ಜೂ. 19 (DaijiworldNews/AA): ಅಮೆರಿಕದ ಅತ್ಯಂತ ಜನನಿಬಿಡ ಸ್ಥಳವಾದ ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ನಲ್ಲಿ ಗುರುವಾರ ಮಧ್ಯಾಹ್ನ 3.40ಕ್ಕೆ ಗುಂಡಿನ ದಾಳಿ ನಡೆದಿದ್ದು, ತಕ್ಷಣವೇ ಶಂಕಿತ ಬಂದೂಕುಧಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಅಸೋಸಿಯೇಷನ್ ಚಾಂಪಿಯನ್ಶಿಪ್ನಲ್ಲಿ ನ್ಯೂಯಾರ್ಕ್ ನಿಕ್ಸ್ ತಂಡ ಐತಿಹಾಸಿಕ ಜಯಗಳಿಸಿತ್ತು. ತಂಡದ ಗೆಲುವನ್ನು ಸಂಭ್ರಮಿಸಲು ಲೋವರ್ ಮ್ಯಾನ್ಹ್ಯಾಟನ್ನ ಬೀದಿಗಳಲ್ಲಿ ಸಾವಿರಾರು ಸಾರ್ವಜನಿಕರು ಹಾಗೂ ಪ್ರವಾಸಿಗರು ಜಮಾಯಿಸಿದ್ದರು. ಈ ವೇಳೆ ಪೊಲೀಸ್ ವಾಹನದಿಂದ ಕೇವಲ ಕೆಲವು ಮೀಟರ್ಗಳ ದೂರದಲ್ಲೇ ಶಂಕಿತ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಿಂದ ಇಡೀ ನಗರದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಗುಂಡಿನ ಶಬ್ದ ಕೇಳುತ್ತಿದ್ದಂತೆ ಟೈಮ್ಸ್ ಸ್ಕ್ವೇರ್ನಲ್ಲಿದ್ದ ನೂರಾರು ಪ್ರವಾಸಿಗರು ಮತ್ತು ಸ್ಥಳೀಯರು ಹೆದರಿ ದಿಕ್ಕಾಪಾಲಾಗಿ ಓಡಿದ್ದಾರೆ. ಭದ್ರತಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನ ನಿಯಂತ್ರಿಸಿದ್ದಾರೆ. ತಕ್ಷಣವೇ ಪೊಲೀಸರು ಶಂಕಿತನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಈ ದಾಳಿಯಲ್ಲಿ ಗಾಯಗೊಂಡ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.