ಲಂಡನ್, ಜೂ. 20 (DaijiworldNews/AA): ಎರಡು ಪ್ಯಾಸೆಂಜರ್ ರೈಲುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಒರ್ವ ರೈಲು ಚಾಲಕ ಮೃತಪಟ್ಟು, ೮೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬ್ರಿಟನ್ನ ಲಂಡನ್ ನಗರದ ಉತ್ತರ ಭಾಗದಲ್ಲಿರುವ ಬೆಡ್ಫೋರ್ಡ್ ಪ್ರದೇಶದ ಸಮೀಪ ಶುಕ್ರವಾರ ಸಂಭವಿಸಿದೆ.

ಎರಡೂ ರೈಲುಗಳು ಲಂಡನ್ನ ಸೇಂಟ್ ಪ್ಯಾಂಕ್ರಾಸ್ ನಿಲ್ದಾಣದತ್ತ ದಕ್ಷಿಣ ದಿಕ್ಕಿನಲ್ಲಿ ಸಂಚರಿಸುತ್ತಿದ್ದವು. ಶುಕ್ರವಾರ ಸಂಜೆ ಸುಮಾರು 5:15ರ ವೇಳೆಗೆ ಬೆಡ್ಫೋರ್ಡ್ ಪಟ್ಟಣದ ಹೊರವಲಯದಲ್ಲಿ ಈ ಭೀಕರ ದುರಂತ ನಡೆದಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತುರ್ತು ಸೇವಾ ಸಿಬ್ಬಂದಿ, ಅಗ್ನಿಶಾಮಕ ದಳ, ಅಂಬುಲೆನ್ಸ್ ತಂಡಗಳು ಹಾಗೂ ಏರ್ ಅಂಬುಲೆನ್ಸ್ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತದಲ್ಲಿ ಓರ್ವ ಚಾಲಕ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆ ಕುರಿತು ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರೈಲ್ವೆ, ಸಮುದ್ರ ಮತ್ತು ಸಾರಿಗೆ ಕಾರ್ಮಿಕರ ರಾಷ್ಟ್ರೀಯ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಎಡ್ಡಿ ಡೆಂಪ್ಸಿ, ಮೃತಪಟ್ಟ ವ್ಯಕ್ತಿ ರೈಲು ಚಾಲಕ ಎಂದು ದೃಢಪಡಿಸಿದ್ದಾರೆ. ಅಪಘಾತದಲ್ಲಿ ರೈಲು ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿರುವ ಬಗ್ಗೆ ವರದಿಯಾಗಿರುವ ಹಿನ್ನೆಲೆ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿರುವುದಾಗಿ ಆರ್ಎಂಟಿ ಒಕ್ಕೂಟ ಹೇಳಿದೆ.