ಟೆಹರಾನ್ , ಜೂ. 20 (DaijiworldNews/AK): ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿದೆ. ಈ ಕ್ರಮ ಶಾಂತಿ ಒಪ್ಪಂದ ಉಲ್ಲಂಘನೆಗೆ ಪ್ರತಿಯಾಗಿ ಕೈಗೊಂಡ ಮೊದಲ ಹೆಜ್ಜೆ ಎಂದು ಇರಾನ್ ಹೇಳಿಕೊಂಡಿದೆ.

ಅಮೆರಿಕ ಮತ್ತು ಇಸ್ರೇಲ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿವೆ. ಇದಕ್ಕಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗುವುದು ಎಂದು ಇರಾನ್ನ ಉನ್ನತ ಜಂಟಿ ಮಿಲಿಟರಿ ಕಮಾಂಡ್, ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿ ತಿಳಿಸಿದೆ ಎಂದು ವರಿಯಾಗಿದೆ. ಇದೇ ರೀತಿ ಆಕ್ರಮಣ ಮುಂದುವರಿದರೆ ಹೆಚ್ಚಿನ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಇರಾನ್ ಎಚ್ಚರಿಸಿದೆ.
ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದೆ. ಇಂದು (ಜೂ.20) ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ನಡೆಸಿದ ಡ್ರೋನ್ ದಾಳಿಗೆ 5 ಜನ ಬಲಿಯಾಗಿದ್ದಾರೆ. ಶುಕ್ರವಾರ (ಜೂ.19) ಮುಂಜಾನೆ ದಕ್ಷಿಣ ಲೆಬನಾನ್ನ ಹಲವು ಪ್ರದೇಶಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದರು.
ಇತ್ತೀಚೆಗಷ್ಟೇ ನಡೆದಿದ್ದ ಶಾಂತಿ ಒಪ್ಪಂದದ ನಿಯಮಗಳನ್ನು ಅಮೆರಿಕ ಗಾಳಿಗೆ ತೂರಿದೆ ಎಂದು ಇರಾನ್ ಮುಖಂಡರು ಆರೋಪಿಸಿದ್ದಾರೆ. “ಒಂದೆಡೆ ಶಾಂತಿ ಮಾತುಕತೆ ನಡೆಸಿ, ಮತ್ತೊಂದೆಡೆ ಇಸ್ರೇಲ್ನ ಆಕ್ರಮಣಕಾರಿ ದಾಳಿಗಳಿಗೆ ಅಮೆರಿಕ ಬೆಂಬಲ ನೀಡುತ್ತಿರುವುದು ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಇರಾನ್ ಟೀಕಿಸಿದೆ.