ಮಾಸ್ಕೋ, ಸೆ.06(Daijiworld News/SS): ಇನ್ನು ಮುಂದೆ ಉಭಯ ದೇಶಗಳ ಸಂಬಂಧವನ್ನು ಇನ್ನೂ ಸುಧಾರಿಸಲು ಶ್ರಮಿಸೋಣ ಎಂದು ಈಸ್ಟ್ ಎಕಾನಮಿಕ್ ಫೋರಂನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ರಷ್ಯಾದಲ್ಲಿ ಅತ್ಯಂತ ಹಿಂದುಳಿದಿರುವ ಪೂರ್ವ ವಲಯದ ಭಾಗಗಳ ಅಭಿವೃದ್ಧಿಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತೇವೆ. ಆ್ಯಕ್ಟ್ ಈಸ್ಟ್ ನೀತಿಯ ಭಾಗವಾಗಿ ಪೂರ್ವ ಏಷ್ಯಾ ದೇಶಗಳೊಂದಿಗೆ ನಮ್ಮ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಇದರ ಅಂಗವಾಗಿ ಈ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಷ್ಯಾಗೆ ಅಮೆರಿಕ ವಿಧಿಸಿರುವ ನಿಷೇಧದಿಂದಾಗಿ ಭಾರತ-ರಷ್ಯಾ ಸಂಬಂಧದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ. ಇಂಧನ ಮತ್ತು ರಕ್ಷಣಾ ವಲಯದಲ್ಲಿ ಹೂಡಿಕೆ ಹಾಗೂ ಸಹಕಾರ ಎಂದಿನಂತೆ ಮುಂದುವರಿಯಲಿದೆ. ರಷ್ಯಾದ ತೈಲ ಮತ್ತು ನೈಸರ್ಗಿಕ ಅನಿಲ ಕ್ಷೇತ್ರದಲ್ಲಿ ಭಾರತದ ಕಂಪನಿಗಳು ಹೂಡಿಕೆ ಮಾಡಿದ್ದರೆ, ಭಾರತದ ಇಂಧನ, ರಕ್ಷಣೆ ಮತ್ತು ತಂತ್ರಜ್ಞಾನ ವರ್ಗಾವಣೆ ಕ್ಷೇತ್ರದಲ್ಲಿ ರಷ್ಯಾ ಕಂಪನಿಗಳು ಹೂಡಿಕೆ ಮಾಡಿವೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ರಷ್ಯಾ ಪ್ರವಾಸದ ವೇಳೆ ರಷ್ಯಾದ ಪೂರ್ವ ವಲಯಕ್ಕೆ 1 ಬಿಲಿಯನ್ ಡಾಲರ್ (7 ಸಾವಿರ ಕೋಟಿ ರೂ.) ಸಾಲ ನೀಡುವ ಘೋಷಣೆ ಮಾಡಿದ್ದಾರೆ. ರಷ್ಯಾದ ಪೂರ್ವ ಭಾಗ ವ್ಲಾಡಿವೋಸ್ಕೋಕ್ನಲ್ಲಿ ಮೊದಲ ಬಾರಿಗೆ ಭಾರತ ರಾಯಭಾರ ಕಚೇರಿಯನ್ನು ಕೂಡ ತೆರೆದಿದೆ.