ಇಸ್ಲಾಮಾಬಾದ್, ಜು. 02 (DaijiworldNews/TA): ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಸುಮಾರು 125 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ‘ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್’ ಅನ್ನು ಸ್ಥಳೀಯ ಉದ್ಯಮಿಯೊಬ್ಬರು ಅಕ್ರಮವಾಗಿ ಧ್ವಂಸಗೊಳಿಸಿರುವ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಲಾಹೋರ್ನಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಫಾರೂಕಾಬಾದ್ ಪಟ್ಟಣದಲ್ಲಿ ಜೂನ್ 24ರ ರಾತ್ರಿ ಈ ಘಟನೆ ನಡೆದಿದ್ದು, ಅಲ್ಲಿನ ಸಿಖ್ ಸಮುದಾಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಘಟನೆಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸಿಖ್ ಸಮುದಾಯದ ಪವಿತ್ರ ಧಾರ್ಮಿಕ ಸ್ಥಳದ ಧ್ವಂಸ ಅತ್ಯಂತ ಖಂಡನೀಯ ಮತ್ತು ವಿಷಾದನೀಯ ಘಟನೆ ಎಂದು ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಹಾಗೂ ಅವರ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇಂತಹ ಘಟನೆಗಳು ಮರುಕಳಿಸುತ್ತಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಗುರುದ್ವಾರವನ್ನು ಧ್ವಂಸಗೊಳಿಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಧ್ವಂಸಗೊಂಡ ಗುರುದ್ವಾರವನ್ನು ಪಾಕಿಸ್ತಾನ ಸರ್ಕಾರವೇ ಶೀಘ್ರದಲ್ಲಿ ಪುನರ್ನಿರ್ಮಿಸಬೇಕು ಎಂದು ಭಾರತ ಆಗ್ರಹಿಸಿದೆ. ವರದಿಗಳ ಪ್ರಕಾರ, ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಅನುಮತಿ (NOC) ಪಡೆಯದೇ ಸ್ಥಳೀಯ ಉದ್ಯಮಿಯೊಬ್ಬರು ಗುರುದ್ವಾರದ ಕಟ್ಟಡವನ್ನು ಕೆಡವಿದ್ದಾರೆ. ಘಟನೆ ಬೆಳಕಿಗೆ ಬಂದ ಬಳಿಕ ಸ್ಥಳೀಯ ಸಿಖ್ ಸಮುದಾಯ ಪ್ರತಿಭಟನೆ ನಡೆಸಿದ್ದು, ಬಳಿಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರ ಸೂಚನೆಯಂತೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ರಮೇಶ್ ಸಿಂಗ್ ಅರೋರಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದು, ಧ್ವಂಸಗೊಂಡ ಗುರುದ್ವಾರವನ್ನು ಪುನಃಸ್ಥಾಪಿಸುವ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ಗುರುದ್ವಾರದ ಸುತ್ತಮುತ್ತ ವ್ಯಾಪಾರ ನಡೆಸುತ್ತಿರುವ ಕೆಲ ಸ್ಥಳೀಯ ಮುಸ್ಲಿಂ ವ್ಯಾಪಾರಿಗಳು ಸರ್ಕಾರದ ಪುನರ್ನಿರ್ಮಾಣ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಳೆದ ಸುಮಾರು 80 ವರ್ಷಗಳಿಂದ ಗುರುದ್ವಾರ ಬಳಕೆಯಲ್ಲಿರಲಿಲ್ಲ. ಈ ಅವಧಿಯಲ್ಲಿ ಆ ಪ್ರದೇಶದಲ್ಲಿ ಹಲವು ಅಂಗಡಿಗಳು ಹಾಗೂ ಕುಟುಂಬಗಳು ನೆಲೆಸಿವೆ. ಇದೀಗ ಗುರುದ್ವಾರವನ್ನು ಪುನಃ ನಿರ್ಮಿಸಿದರೆ ಅನೇಕ ಕುಟುಂಬಗಳು ಜೀವನೋಪಾಯ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದು ಅವರು ವಾದಿಸಿದ್ದಾರೆ. ಹೀಗಾಗಿ, ಪುನರ್ನಿರ್ಮಾಣ ಕೈಗೊಳ್ಳುವ ಮೊದಲು ಸರ್ಕಾರ ಪರ್ಯಾಯ ವಸತಿ ಹಾಗೂ ಜೀವನೋಪಾಯದ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಘಟನೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳು ಮತ್ತು ಐತಿಹಾಸಿಕ ಧಾರ್ಮಿಕ ತಾಣಗಳ ಸಂರಕ್ಷಣೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.