ಕಠ್ಮಂಡು, ಜು. 26 (DaijiworldNews/AA): ಭಾರತದ 200 ಮತ್ತು 500 ರೂ. ನೋಟುಗಳಿಗೆ ಮತ್ತೆ ಮಾನ್ಯತೆ ನೀಡುವ ಕುರಿತು ನೇಪಾಳ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಈ ಮೂಲಕ ಭಾರತದೊಂದಿಗಿನ ತನ್ನ ಸಂಬಂಧ ಸುಧಾರಿಸಿಕೊಳ್ಳಲು ನೇಪಾಳ ಮುಂದಾಗಿದೆ.

ಭಾರತೀಯ ಕರೆನ್ಸಿಗಳ ಮೇಲೆ ಸುಮಾರು 10 ವರ್ಷಗಳ ಹಿಂದೆ ಹೇರಲಾಗಿದ್ದ ನಿರ್ಬಂಧ ಅಂತ್ಯಗೊಳಿಸಿದ್ದು, ಅದರಂತೆ ಭಾರತದ 200 ಮತ್ತು 500 ರೂ ಕರೆನ್ಸಿಗಳಿಗೆ ನೇಪಾಲ ಸರ್ಕಾರ ಅನುಮತಿ ನೀಡಿದೆ. ಅದರಂತೆ ಓರ್ವ ವ್ಯಕ್ತಿ 25,000 ರೂ. ವರೆಗೆ ಕೊಂಡೊಯ್ಯಲು ಅನುಮತಿ ನೀಡಲಾಗಿದೆ.
ಸುಮಾರು ಒಂದು ದಶಕದಿಂದ ಜಾರಿಯಲ್ಲಿದ್ದ ನಿರ್ಬಂಧವನ್ನ ಇದೀಗ ನೇಪಾಳ ಸರ್ಕಾರ ಸಡಿಲಿಸಿದ್ದು, ಭಾರತೀಯ ಹಾಗೂ ನೇಪಾಳದ ನಾಗರಿಕರು 200 ಮತ್ತು 500 ರೂ. ಭಾರತೀಯ ಕರೆನ್ಸಿ ನೋಟುಗಳನ್ನು ದೇಶದೊಳಗೆ ತರಲು ಹಾಗೂ ಹೊರಗೆ ಕೊಂಡೊಯ್ಯಲು ಅವಕಾಶ ನೀಡಲಾಗಿದೆ.
2016ರ ನೋಟು ಅಮಾನ್ಯೀಕರಣದ ಬಳಿಕ 100 ರೂ. ಕ್ಕಿಂತ ಹೆಚ್ಚಿನ ಮುಖಬೆಲೆಯ ಭಾರತೀಯ ನೋಟುಗಳನ್ನು ನೇಪಾಳದಲ್ಲಿ ಬಳಸಲು ಮತ್ತು ಸಾಗಿಸಲು ನಿರ್ಬಂಧ ಹೇರಲಾಗಿತ್ತು. ಇದೀಗ ಆ ನಿಯಮವನ್ನು ಪರಿಷ್ಕರಿಸಿ, ಹೊಸ ವಿನ್ಯಾಸದ 200 ಹಾಗೂ 500 ರೂ. ನೋಟುಗಳನ್ನು ಕೊಂಡೊಯ್ಯಲು ಅನುಮತಿಸಲಾಗಿದೆ.