ಅಥೆನ್ಸ್, ಸೆ. 06 (DaijiworldNews/TA): ಗ್ರೀಸ್ ರಾಜಧಾನಿ ಅಥೆನ್ಸ್ನ ಉತ್ತರ ಭಾಗದಲ್ಲಿರುವ ಟನಾಗ್ರಾ ಏರ್ಬೇಸ್ನಲ್ಲಿ ನಡೆಯುತ್ತಿದ್ದ ‘ಅಥೆನ್ಸ್ ಫ್ಲೈಯಿಂಗ್ ವೀಕ್’ ಏರ್ ಶೋ ವೇಳೆ ಗ್ರೀಕ್ ವಾಯುಪಡೆಯ ಎಫ್-4 ಫ್ಯಾಂಟಮ್ ಯುದ್ಧ ವಿಮಾನ ಪತನಗೊಂಡು ಇಬ್ಬರು ಪೈಲಟ್ಗಳು ಮೃತಪಟ್ಟಿದ್ದಾರೆ.

ಸಾವಿರಾರು ಪ್ರೇಕ್ಷಕರು ವೈಮಾನಿಕ ಸಾಹಸ ಪ್ರದರ್ಶನ ವೀಕ್ಷಿಸುತ್ತಿದ್ದ ಸಂದರ್ಭದಲ್ಲೇ ಈ ದುರ್ಘಟನೆ ಸಂಭವಿಸಿದೆ. ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಎರಡು ಆಸನಗಳ ಯುದ್ಧ ವಿಮಾನವೊಂದು ದಿಢೀರನೆ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿದೆ. ಕ್ಷಣಾರ್ಧದಲ್ಲೇ ವಿಮಾನದಲ್ಲಿ ಸ್ಫೋಟ ಸಂಭವಿಸಿ ಬೆಂಕಿಯುಂಡೆಯಾಗಿ ಮಾರ್ಪಟ್ಟಿದ್ದು, ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮಿದೆ.
ಅತ್ಯಂತ ಕಡಿಮೆ ಎತ್ತರದಲ್ಲಿ ಮತ್ತು ವೇಗವಾಗಿ ವಿಮಾನ ಪತನಗೊಂಡಿದ್ದರಿಂದ ಇಬ್ಬರು ಪೈಲಟ್ಗಳಿಗೆ ಪ್ಯಾರಾಚೂಟ್ ಮೂಲಕ ಹೊರಜಿಗಿಯಲು ಸಮಯ ಸಿಗಲಿಲ್ಲ ಎನ್ನಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಬಳಿಕ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಯಿತು. ಅಪಘಾತದಲ್ಲಿ ಏರ್ ಶೋ ವೀಕ್ಷಿಸುತ್ತಿದ್ದ ಜನರಿಗೆ ಯಾವುದೇ ಅಪಾಯವಾಗಿಲ್ಲ. ಆದರೆ ವಿಮಾನ ಪತನದಿಂದ ವಾಯುನೆಲೆ ಹಾಗೂ ಸಮೀಪದ ಅರಣ್ಯ ಪ್ರದೇಶದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತು.
ಬೆಂಕಿಯನ್ನು ನಿಯಂತ್ರಿಸಲು ಸುಮಾರು 85 ಅಗ್ನಿಶಾಮಕ ಸಿಬ್ಬಂದಿ, 11 ನೀರು ಚಿಮುಕಿಸುವ ವಿಮಾನಗಳು ಹಾಗೂ ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ವಾಯುನೆಲೆಯ ಸಮೀಪದ ನಿವಾಸಿಗಳನ್ನು ಸ್ಥಳಾಂತರಿಸುವಂತೆಯೂ ಸೂಚಿಸಲಾಯಿತು. ದುರಂತದ ಬೆನ್ನಲ್ಲೇ ವಾರಾಂತ್ಯದಲ್ಲಿ ನಡೆಯಬೇಕಿದ್ದ ಉಳಿದ ಎಲ್ಲಾ ಏರ್ ಶೋ ಪ್ರದರ್ಶನಗಳನ್ನು ರದ್ದುಗೊಳಿಸಲಾಯಿತು. ಘಟನೆಗೆ ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಹಾಗೂ ಸೈಪ್ರಸ್ ರಕ್ಷಣಾ ಸಚಿವ ವಾಸಿಲಿಸ್ ಪಾಲ್ಮಾಸ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕರ್ತವ್ಯದಲ್ಲಿದ್ದ ಇಬ್ಬರು ಹೆಲೆನಿಕ್ ವಾಯುಪಡೆ ಅಧಿಕಾರಿಗಳ ಸಾವಿನ ಹಿನ್ನೆಲೆಯಲ್ಲಿ ಗ್ರೀಕ್ ವಾಯುಪಡೆ ಮೂರು ದಿನಗಳ ಅಧಿಕೃತ ಶೋಕಾಚರಣೆಯನ್ನು ಘೋಷಿಸಿದೆ.
ಗ್ರೀಕ್ ವಾಯುಪಡೆಯ ಎಫ್-4 ಫ್ಯಾಂಟಮ್ ಯುದ್ಧ ವಿಮಾನಗಳು 1974ರಿಂದ ಸೇವೆಯಲ್ಲಿವೆ. ಹಳೆಯ ತಲೆಮಾರಿನ ಈ ಯುದ್ಧ ವಿಮಾನಗಳನ್ನು ಶೀಘ್ರದಲ್ಲೇ ನಿವೃತ್ತಿಗೊಳಿಸಲು ಗ್ರೀಸ್ ಯೋಜಿಸಿದೆ. ಹೀಗಾಗಿ ‘ಅಥೆನ್ಸ್ ಫ್ಲೈಯಿಂಗ್ ವೀಕ್’ನಲ್ಲಿ ನಡೆದ ಈ ಪ್ರದರ್ಶನವು ಎಫ್-4 ಫ್ಯಾಂಟಮ್ನ ಕೊನೆಯ ಸಾರ್ವಜನಿಕ ಪ್ರದರ್ಶನಗಳಲ್ಲಿ ಒಂದಾಗಿತ್ತು. 2023ರ ಜನವರಿಯಲ್ಲೂ ಗ್ರೀಸ್ನ ಎಫ್-4 ಫ್ಯಾಂಟಮ್ ಯುದ್ಧ ವಿಮಾನವೊಂದು ತರಬೇತಿ ಕಾರ್ಯಾಚರಣೆ ವೇಳೆ ಅಯೋನಿಯನ್ ಸಮುದ್ರಕ್ಕೆ ಪತನಗೊಂಡಿತ್ತು. ಆ ಘಟನೆಯಲ್ಲೂ ಇಬ್ಬರು ಪೈಲಟ್ಗಳು ಮೃತಪಟ್ಟಿದ್ದರು.