ಬುರೈದ, ಸೆ. 06 (DaijiworldNews/TA): ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಅಲ್ ಕಸೀಮ್ ಝೋನ್ ವತಿಯಿಂದ ‘LEGACY NIGHT-2026’ ಫ್ಯಾಮಿಲಿ ಮೀಟ್ ಕಾರ್ಯಕ್ರಮ ಸೆಪ್ಟೆಂಬರ್ 3ರಂದು ಗುರುವಾರ ಬುರೈದ ರೆಸಾರ್ಟ್ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮಕ್ಕಳ ಕಲಾ ಪ್ರತಿಭೆ ಅನಾವರಣ, ದಫ್, ಕವಾಲಿ, ಸೌಹಾರ್ದ ಸಂಗಮ, ಇಸ್ಲಾಮಿಕ್ ಪ್ರಭಾಷಣ, ಅನ್ನದಾನ ಹಾಗೂ ವಿವಿಧ ಮನರಂಜನಾ ಸ್ಪರ್ಧೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.












ಕಾರ್ಯಕ್ರಮದ ಅಂಗವಾಗಿ ಸುಮಾರು 80 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕ್ವಿಜ್, ಕಿರಾಅತ್, ಪ್ರವಾದಿ ಮದಹ್ ಗೀತೆ, ಭಾಷಣ, ಕಲರಿಂಗ್ ಹಾಗೂ ಕ್ಯಾಲಿಗ್ರಫಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಮಹಿಳೆಯರಿಗಾಗಿ ‘Cook Without Fire’ ಸ್ಪರ್ಧೆ ಹಾಗೂ ಡಿಜಿಟಲ್ ಕ್ವಿಜ್ ಆಯೋಜಿಸಲಾಗಿತ್ತು. ಪುರುಷರಿಗಾಗಿ ಡಿಜಿಟಲ್ ಕ್ವಿಜ್, ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ನಡೆದ ಆಕರ್ಷಕ ಡಿಜಿಟಲ್ ಕ್ವಿಜ್ನಲ್ಲಿ ವಿಜೇತರಿಗೆ ಚಿನ್ನದ ನಾಣ್ಯ ಬಹುಮಾನವಾಗಿ ನೀಡಲಾಯಿತು.
ವಾಲಿಬಾಲ್ ಪಂದ್ಯಾಟದಲ್ಲಿ ಹರಬಿ ಸ್ಪೋರ್ಟ್ಸ್, ಬುರೈದ ಪ್ರಥಮ ಸ್ಥಾನ ಪಡೆದರೆ, ಕುಕ್ಕುವಳ್ಳಿ ಫ್ರೆಂಡ್ಸ್, ಬುರೈದ ದ್ವಿತೀಯ ಸ್ಥಾನ ಪಡೆದುಕೊಂಡಿತು. ಹಗ್ಗಜಗ್ಗಾಟದಲ್ಲಿ KCF ಸುಲ್ತಾನ್ ಯೂನಿಟ್ ಪ್ರಥಮ ಹಾಗೂ ಬರಕಾ ಸ್ವೀಟ್ಸ್, ಬುರೈದ ದ್ವಿತೀಯ ಸ್ಥಾನ ಗಳಿಸಿತು. ಬುರೈದ ಪ್ರದೇಶದ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಾಮಾಜಿಕ, ಸಾಮುದಾಯಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಪ್ರಮುಖರನ್ನು ಒಳಗೊಂಡ ಸೌಹಾರ್ದ ಸಂಗಮ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘LEGACY NIGHT-2026’ ಸ್ವಾಗತ ಸಮಿತಿ ಚೇರ್ಮನ್ ಅಬ್ದುಲ್ ಖಾದರ್ ಕಣ್ಣಂಗಾರ್ ವಹಿಸಿದ್ದರು. ಸ್ವಾಗತ ಸಮಿತಿ ಕನ್ವೀನರ್ ಸಾಲಿಹ್ ಬೆಳ್ಳಾರೆ ಅತಿಥಿಗಳನ್ನು ಸ್ವಾಗತಿಸಿದರು.
KCF ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ KCF ರಿಯಾದ್ ಝೋನ್ ಕೋಶಾಧಿಕಾರಿ ಹಬೀಬುಲ್ಲಾ ತೆಕ್ಕಾರ್ ಅವರು KCFನ ಕಾರ್ಯಾಚರಣೆ ಹಾಗೂ ಸಂಘಟನೆಯ ಚಟುವಟಿಕೆಗಳ ಕುರಿತು ಮಾತನಾಡಿದರು. ಖ್ಯಾತ ಸಮಾಜ ಸೇವಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಾಮಾಜಿಕ ಮತ್ತು ಸಾಮುದಾಯಿಕ ಸೇವೆಯಲ್ಲಿ ಗುರುತಿಸಿಕೊಂಡಿರುವ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಅವರಿಗೆ ‘KCF AL QASSIM ZONE INSPIRE AWARD-2026’ ನೀಡಿ ಗೌರವಿಸಲಾಯಿತು.
ರಿಯಾದ್ KCF ತಂಡದ ದಫ್ ಮತ್ತು ಕವಾಲಿ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು. ಇದೇ ವೇಳೆ ನಡೆದ ಇಸ್ಲಾಮಿಕ್ ಪ್ರಭಾಷಣ ಕಾರ್ಯಕ್ರಮದಲ್ಲಿ ಕೇರಳ-ಕರ್ನಾಟಕ ಭಾಗದಲ್ಲಿ ಪ್ರಸಿದ್ಧರಾಗಿರುವ ಇಸ್ಲಾಮಿಕ್ ವಿದ್ವಾಂಸ ಹಾಗೂ ಮಲಪ್ಪುರಂ ನಿಲಂಬೂರು ಮಜ್ಮಅ್ ಸಖಾಫತಿ ಸಂಸ್ಥೆಯ ಸಾರಥಿ ಶೈಖುನಾ ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಅವರು ಅರ್ಥಗರ್ಭಿತ ಸಂದೇಶ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು KCF ಅಲ್ ಕಸೀಮ್ ಝೋನ್ ಅಧ್ಯಕ್ಷ ಅಬ್ದುಲ್ ಕರೀಮ್ ಇಮ್ದಾದಿ ವಹಿಸಿದ್ದರು. ಬುರೈದ ICF ಹಿರಿಯ ನಾಯಕ ಅಬ್ದುಲ್ ಖಾದರ್ ದಾರಿಮಿ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಡಾ. ಫಾರೂಕ್ ನಈಮಿ ಉಸ್ತಾದ್ ರಚಿಸಿರುವ ‘ಹಿಜ್ರಾ ಹೆಜ್ಜೆ ಗುರುತುಗಳು’ ಪುಸ್ತಕದ ಕನ್ನಡ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಅಲ್ಲದೆ, ಕಳೆದ ವರ್ಷಗಳಲ್ಲಿ ಅಗಲಿದ KCF ಕಾರ್ಯಕರ್ತರ ಅನುಸ್ಮರಣೆಯೂ ನಡೆಯಿತು. KCF ಝೋನ್ ಸಂಘಟನಾ ವಿಭಾಗದ ಅಧ್ಯಕ್ಷ ಮುಸ್ತಾಫಾ ಲತೀಫಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಝೋನ್ ಕಾರ್ಯದರ್ಶಿ ಶಾಹುಲ್ ಹಮೀದ್ ಮಣ್ಣಾಪು ಅವರು ಧನ್ಯವಾದ ಅರ್ಪಿಸಿದರು.