ವಾಷಿಂಗ್ಟನ್, ಸೆ.14(Daijiworld News/SS): ಮೋಸ್ಟ್ ವಾಂಟೆಡ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್'ನನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಅಮೆರಿಕ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿರುವುದಾಗಿ ಇಂದು ಶ್ವೇತ ಭವನದಿಂದ ಬಿಡುಗಡೆ ಮಾಡಲಾಗಿರುವ ಮಾಧ್ಯಮ ಪ್ರಕಟಣೆಯಲ್ಲಿ ಹೇಳಲಾಗಿದೆ.
ಜುಲೈ ಕೊನೆಯ ವಾರ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಅಮೆರಿಕ ಮಾಧ್ಯಮಗಳು ಹಮ್ಜಾ ಹತ್ಯೆಯಾಗಿರುವ ಬಗ್ಗೆ ವರದಿ ಮಾಡಿದ್ದವು. ಇದೀಗ ಅಫ್ಗಾನಿಸ್ತಾನ–ಪಾಕಿಸ್ತಾನ ಗಡಿ ಭಾಗದಲ್ಲಿ ನಡೆಸಲಾಗಿರುವ ಭಯೋತ್ಪಾದನೆ ನಿರ್ಮೂಲನೆ ಕಾರ್ಯಾಚರಣೆಯಲ್ಲಿ ಹಮ್ಜಾ ಬಿನ್ ಲಾಡೆನ್'ನನ್ನು ಹೊಡೆದುರುಳಿಸಿದೆ ಎಂದು ಸ್ವತಃ ಡೊನಾಲ್ಡ್ ಟ್ರಂಪ್ ಸ್ಪಷ್ಟನೆ ನೀಡಿದ್ದಾರೆ.
ಲಾಡೆನ್ ಮೂರನೇ ಹೆಂಡತಿಯ ಮಗನಾದ ಹಮ್ಜಾ, ಆತನ 20 ಮಕ್ಕಳಲ್ಲಿ 15ನೇಯವನು. 30 ವರ್ಷದ ಹಮ್ಜಾ ಬಿನ್ ತನ್ನ ತಂದೆ ಒಸಾಮಾ ಬಿನ್ ಲಾಡೆನ್ ಹಾಗೂ ಸಹೋದರ ಖಾಲಿದ್ ಬಿನ್ ಲಾಡೆನ್ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದನು. ಹೀಗಾಗಿ ಅಮೆರಿಕ ಹಮ್ಜಾ ತಲೆಗೆ 10 ಲಕ್ಷ ಡಾಲರ್ ಇನಾಮು ಘೋಷಿಸಿತ್ತು.