ಮ್ಯಾನ್ಮಾರ್, ಸೆ.29 (DaijiworldNews/AA): ಪಶ್ಚಿಮ ಮ್ಯಾನ್ಮಾರ್ನ ರಖೈನ್ ರಾಜ್ಯದಲ್ಲಿ ಅರಾಕನ್ ಸೇನೆಯ ನಿಯಂತ್ರಣದಲ್ಲಿರುವ ಕ್ಯುಕ್ತಾವ್ ಪಟ್ಟಣದ ಪ್ರಮುಖ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಮಿಲಿಟರಿ ಆಡಳಿತವು ಭೀಕರ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ 49 ಮಂದಿ ನಾಗರಿಕರು ಸಾವನ್ನಪ್ಪಿದ್ದು, 58 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ ಮಧ್ಯಾಹ್ನ ವ್ಯಾಪಾರ-ವಹಿವಾಟು ನಡೆಯುತ್ತಿದ್ದ ಸಮಯದಲ್ಲಿ ಮಿಲಿಟರಿ ಫೈಟರ್ ಜೆಟ್ ಒಂದು ಸ್ಥಳೀಯ ಸಗಟು ಮಾರುಕಟ್ಟೆ ಪ್ರದೇಶದ ಮೇಲೆ ಎರಡು ಬಾಂಬ್ಗಳನ್ನು ಬೀಳಿಸಿದೆ. ಈ ದಾಳಿಯಲ್ಲಿ ತರಕಾರಿ, ದಿನಸಿ ಮಾರಾಟಗಾರರು, ಖರೀದಿಗೆ ಬಂದಿದ್ದ ಸಾರ್ವಜನಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ 58 ಜನರ ಪೈಕಿ ಸುಮಾರು 22 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಬಾಂಬ್ ಸ್ಫೋಟದ ರಭಸಕ್ಕೆ ಹತ್ತಿರದ ಕಟ್ಟಡಗಳು ಹೊತ್ತಿ ಉರಿದಿದ್ದು, ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ ಹಾಗೂ ಸಮೀಪದ ಸೇತುವೆ ಹಾನಿಗೊಳಗಾಗಿದೆ.
"ಸೇನೆಯು ಯುದ್ಧಭೂಮಿಯಲ್ಲಿ ಸೋಲುತ್ತಿರುವುದನ್ನು ಸಹಿಸದೆ, ಉದ್ದೇಶಪೂರ್ವಕವಾಗಿ ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು ಸಾಮೂಹಿಕ ಹತ್ಯೆ ನಡೆಸುತ್ತಿದೆ. ಈ ಮಾರಣಹೋಮಕ್ಕೆ ಕಾರಣರಾದ ಸೇನಾ ಕಮಾಂಡರ್ಗಳು ಮತ್ತು ಜುಂಟಾ ಆಡಳಿತದ ವಿರುದ್ಧ ಶೀಘ್ರದಲ್ಲೇ ಪರಿಣಾಮಕಾರಿ ಪ್ರತೀಕಾರ ತೀರಿಸಿಕೊಳ್ಳಲಾಗುವುದು" ಎಂದು ಅರಾಕನ್ ಸೈನ್ಯ ಎಚ್ಚರಿಕೆ ನೀಡಿದೆ.