ಮಾಸ್ಕೋ, ಸೆ.29 (DaijiworldNews/TA): ತರಬೇತಿ ಹಾರಾಟ ನಡೆಸುತ್ತಿದ್ದ ರಷ್ಯಾದ ತುಪೊಲೆವ್ ಟು-95 ಸೇನಾ ಬಾಂಬರ್ ವಿಮಾನ ಅಮುರ್ ಪ್ರಾಂತ್ಯದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ 6 ಸಿಬ್ಬಂದಿ ಮೃತಪಟ್ಟಿದ್ದಾರೆ. ಮತ್ತೋರ್ವ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ರಕ್ಷಣಾ ಸಚಿವಾಲಯದ ಪ್ರಕಾರ, ಸೆಪ್ಟೆಂಬರ್ 29ರಂದು ತರಬೇತಿ ಹಾರಾಟದ ವೇಳೆ ಈ ದುರಂತ ಸಂಭವಿಸಿದೆ. ವಿಮಾನವು ಜನವಸತಿಯಿಲ್ಲದ ಪ್ರದೇಶದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಏಳು ಸಿಬ್ಬಂದಿಗಳ ಪೈಕಿ ಆರು ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ ಮತ್ತೋರ್ವ ಸಿಬ್ಬಂದಿಯನ್ನು ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ವಿಮಾನದಲ್ಲಿ ಯಾವುದೇ ಶಸ್ತ್ರಾಸ್ತ್ರ ಅಥವಾ ಮದ್ದುಗುಂಡು ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿಗಳ ಪ್ರಕಾರ, ಅಮುರ್ ಪ್ರಾಂತ್ಯದ ಕ್ರಾಸ್ನೊಯಾರೋವೊ ಗ್ರಾಮದ ಸಮೀಪ ವಿಮಾನ ಪತನಗೊಂಡಿದೆ. ಪತನದ ಬಳಿಕ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಆದರೆ ಅವುಗಳ ಸ್ವತಂತ್ರ ಪರಿಶೀಲನೆ ನಡೆದಿಲ್ಲ.
ವಿಮಾನ ಪತನಕ್ಕೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಘಟನೆಯ ಕುರಿತು ತನಿಖೆ ನಡೆಸಲು ರಷ್ಯಾದ ವಾಯುಪಡೆಯ ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ತಾಂತ್ರಿಕ ದೋಷ ಸೇರಿದಂತೆ ಅಪಘಾತಕ್ಕೆ ಕಾರಣವಾಗಿರುವ ಅಂಶಗಳ ಕುರಿತು ತನಿಖೆ ನಡೆಯಲಿದೆ. ಟು-95 ರಷ್ಯಾದ ದೀರ್ಘ-ಶ್ರೇಣಿಯ ಕಾರ್ಯತಂತ್ರದ ಬಾಂಬರ್ ವಿಮಾನವಾಗಿದ್ದು, ನಿಯಮಿತ ತರಬೇತಿ ಹಾಗೂ ಸೇನಾ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ.