ಇಸ್ಲಾಮಾಬಾದ್, ಸೆ.24(Daijiworld News/SS): ಭಾರತಕ್ಕೆ ಅಂತಾರಾಷ್ಟ್ರೀಯ ಸಮುದಾಯಗಳ ದಾರಿತಪ್ಪಿಸುವ ಕೆಲಸದಲ್ಲಿ ಯಶಸ್ಸು ಸಿಗಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.
ಪಾಕಿಸ್ತಾನ ಬಾಲಾಕೋಟ್'ನ ಭಯೋತ್ಪಾದಕ ಶಿಬಿರ ತಾಣಗಳು ಮರು ಸಕ್ರಿಯಗೊಂಡಿದ್ದು 500 ಒಳನುಸುಳುಕೋರರು ಭಾರತದೊಳಗೆ ನುಗ್ಗಲು ಹೊಂಚುಹಾಕುತ್ತಿದ್ದಾರೆ. ಪಾಕಿಸ್ತಾನ ಇದೇ ರೀತಿಯ ವರ್ತನೆ ತೋರಿದರೆ ಕಳೆದ ಫೆಬ್ರವರಿಯಲ್ಲಿ ನೀಡಿದ್ದ ಸರ್ಜಿಕಲ್ ಸ್ಟ್ರೈಕ್ ಗಿಂತ ದೊಡ್ಡ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಭಾರತ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಎಚ್ಚರಿಸಿದ್ದರು. ಆದರೆ ಈ ಹೇಳಿಕೆಯನ್ನು ಪಾಕಿಸ್ತಾನ ತಳ್ಳಿಹಾಕಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಭಾರತ ಸೇನಾ ಮುಖ್ಯಸ್ಥರ ಹೇಳಿಕೆ ಸಂಪೂರ್ಣ ಆಧಾರರಹಿತ, ಇದು ಜಮ್ಮು-ಕಾಶ್ಮೀರದಲ್ಲಿ ಮಾನವೀಯತೆ ಬಿಕ್ಕಟ್ಟು ಎದುರಿಸುತ್ತಿರುವ ಸಮಯದಲ್ಲಿ ಅಂತಾರಾಷ್ಟ್ರೀಯ ಸಮುದಾಯಗಳ ಗಮನವನ್ನು ಬೇರೆಡೆಗೆ ತಿರುಗಿಸಲು ಭಾರತ ಮಾಡುತ್ತಿರುವ ಹತಾಶೆಯ ಯತ್ನ. ಇಂತಹ ತಂತ್ರಗಳಿಂದ ಭಾರತಕ್ಕೆ ಅಂತಾರಾಷ್ಟ್ರೀಯ ಸಮುದಾಯಗಳ ದಾರಿತಪ್ಪಿಸುವ ಕೆಲಸದಲ್ಲಿ ಯಶಸ್ಸು ಸಿಗಲು ಸಾಧ್ಯವಿಲ್ಲ ಎಂದು ತಿಳಿಸಿದೆ.