ನ್ಯೂಯಾರ್ಕ್, ಸೆ.27(Daijiworld News/SS): ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿ, ಭಾರತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಲು ಸಾಧ್ಯ ಎಂಬ ವಿಷಯದಲ್ಲಿ ಇಮ್ರಾನ್ ಖಾನ್ ಭರವಸೆ ಕಳೆದುಕೊಂಡಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ನಂಬಿಕೆ ತಮಗಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಬೇರೆ ವಿಷಯಗಳಿಗಿಂತಲೂ ಕಾಶ್ಮೀರವೇ ಮುಖ್ಯ ನಮಗೆ. ಅದಕ್ಕಾಗಿಯೇ ನಾನು ನ್ಯೂಯಾರ್ಕ್ಗೆ ಬಂದಿದ್ದೇನೆ. ಆ ಪ್ರದೇಶದಲ್ಲಿ ಬಹುದೊಡ್ಡ ದುರಂತದತ್ತ ನಾವು ಸಾಗುತ್ತಿದ್ದೇವೆ ಎಂಬ ಸಂಗತಿ ವಿಶ್ವದ ಅರವಿಗೇ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುವುದರಿಂದ ಹೆಚ್ಚಿನದ್ದೇನೋ ಆಗಿಬಿಡುತ್ತದೆ ಎಂಬ ಆಶಾಭಾವ ನನಗಿಲ್ಲ. ಆದರೆ, ಅಲ್ಲಿ ಆಗಬಹುದಾದ ಜನಾಂಗೀಯ ಹತ್ಯೆ ಬಗ್ಗೆ ವಿಶ್ವದ ಗಮನಸೆಳೆದು, ಎಚ್ಚರಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.