ವಾಷಿಂಗ್ಟನ್, ಸೆ.27(Daijiworld News/SS): ಕ್ಷಿಪ್ರ ರೀತಿಯಲ್ಲಿ ಜಮ್ಮು- ಕಾಶ್ಮೀರದಲ್ಲಿ ನಿರ್ಬಂಧ ತೆರವುಗೊಳಿಸಲು ಭಾರತ ಮುಂದಾಗಲಿದೆ ಎಂದು ಅಮೆರಿಕಾ ವಿಶ್ವಾಸ ವ್ಯಕ್ತಡಿಸಿದೆ.
ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿರ್ಬಂಧವನ್ನು ಕ್ಷಿಪ್ರಗತಿಯಲ್ಲಿ ತೆರವುಗೊಳಿಸುವಂತೆ ಭಾರತವನ್ನು ಅಮೆರಿಕಾ ಒತ್ತಾಯಿಸಿದೆ. ಜಮ್ಮು- ಕಾಶ್ಮೀರದಲ್ಲಿ ನಿರ್ಬಂಧ ಜೊತೆಗೆ ರಾಜಕೀಯ ಮುಖಂಡರು, ಉದ್ಯಮಿದಾರರು ಮತ್ತಿತರರನ್ನು ಗೃಹ ಬಂಧನದಲ್ಲಿ ಇಟ್ಟಿರುವುದಕ್ಕೆ ಅಮೆರಿಕ ಕಳವಳಗೊಂಡಿದೆ. ಈ ಮುಖಂಡರನ್ನು ಬಿಡುಗಡೆ ಮಾಡುವುದನ್ನು ಎದುರು ನೋಡುತ್ತಿದ್ದೇವೆ. ಉಭಯ ದೇಶಗಳ ಮಾತುಕತೆ ಮೂಲಕ ಪರಿಸ್ಥಿತಿಯನ್ನು ಸರಿಮಾಡಿಕೊಂಡರೆ ವಿಶ್ವಕ್ಕೆ ಅನುಕೂಲವಾಗಲಿದೆ. ಒಂದು ವೇಳೆ ಉಭಯ ದೇಶಗಳು ಕೇಳಿಕೊಂಡರೆ ಟ್ರಂಪ್ ಮಧ್ಯಸ್ಥಿಕೆ ವಹಿಸಲಿದ್ದಾರೆ ಎಂದು ದಕ್ಷಿಣ ಏಷ್ಯಾ ಉನ್ನತಾಧಿಕಾರಿ ಅಲೈಸ್ ವೆಲ್ಸ್ ತಿಳಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಬಿಕ್ಕಟ್ಟು ಪರಿಸ್ಥಿತಿಯನ್ನು ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸಕ್ತಿ ವಹಿಸಿದ್ದಾರೆ. ಈ ಸಂಬಂಧ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದತಿ ನಂತರ ಆಗಸ್ಟ್ ತಿಂಗಳಿನಿಂದಲೂ ಕಣಿವೆ ರಾಜ್ಯದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ರಾಜಕೀಯ ಮುಖಂಡರನ್ನು ಗೃಹ ಬಂಧನದಲ್ಲಿಡಲಾಗಿದೆ. ಆದಾಗ್ಯೂ ಕಳೆದ ಒಂದು ತಿಂಗಳಿನಿಂದಲೂ ಇಂಟರ್ ನೆಂಟ್, ಮೊಬೈಲ್ ಸೇವೆಗೆ ಅವಕಾಶ ಮಾಡಿಕೊಡಲಾಗಿದೆ.