ಬ್ಯಾಂಕಾಕ್, ಅ 6 (Daijiworld News/RD): ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿ ನ್ಯಾಯಾಧೀಶರೊಬ್ಬರು ಎಲ್ಲರೂ ನೋಡು ನೋಡುತ್ತಿದ್ದಂತೆಯೇ ಕೋರ್ಟಿನೊಳಗೆ ತಮ್ಮ ಎದೆಗೆ ಗುಂಡು ಹಾರಿಸಿಕೊಂಡ ಘಟನೆ ದಕ್ಷಿಣ ಥಾಯ್ಲೆಂಡ್ನ ಹೃದಯ ಭಾಗದಲ್ಲಿರುವ ನ್ಯಾಯಾಲಯದಲ್ಲಿ ನಡೆದಿದೆ.
ಯಾಲ ನ್ಯಾಯಾಲಯದ ನ್ಯಾಯಾಧೀಶ ಕನಕೋರ್ನ್ ಪಿಯಾಂಚಾನಾ ಆತ್ಮಹತ್ಯೆಗೆ ಯತ್ನಿಸಿವರು. ಅವರು ಗುಂಡು ಹಾರಿಸಿ ಕೊಲೆಗೈದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ಅವರು ತೀರ್ಪು ನೀಡುತ್ತಿದ್ದರು. ಆರೋಪಿಗಳನ್ನು ಖುಲಾಸೆಗೊಳಿಸಿದ ಬಳಿಕ, ನ್ಯಾಯಾಧೀಶರು ಶುದ್ಧ ನ್ಯಾಯ ವ್ಯವಸ್ಥೆಯೊಂದನ್ನು ಜಾರಿಗೊಳಿಸುವಂತೆ ಮನವಿ ಮಾಡಿದರು. ಬಳಿಕ ಪಿಸ್ತೂಲನ್ನು ಎತ್ತಿಕೊಂಡು ಎದೆಗೆ ಗುಂಡು ಹಾರಿಸಿಕೊಂಡರು. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಅವರ ಈ ಮಾತುಗಳು ಅವರ ಫೋನ್ ಮೂಲಕ ಫೇಸ್ಬುಕ್ ಲೈವ್ನಲ್ಲಿ ನೇರ ಪ್ರಸಾರಗೊಂಡಿದ್ದು, 'ಯಾರನ್ನಾದರೂ ಶಿಕ್ಷಿಸಬೇಕಾದರೆ ಸ್ಪಷ್ಟ ಹಾಗೂ ವಿಶ್ವಾಸಾರ್ಹ ಪುರಾವೆ ಬೇಕು. ಪುರಾವೆಗಳ ಬಗ್ಗೆ ನಿಮಗೆ ಖಚಿತತೆ ಇರದಿದ್ದರೆ, ಅವರನ್ನು ಶಿಕ್ಷಿಸಬೇಡಿ' ಮಾತನಾಡಿದ ನ್ಯಾಯಾಧೀಶರು ಮನವಿ ಮಾಡಿದ್ದರು, ಕೊನೆಗೆ ಏಕಾಏಕಿ ರಿವಾಲ್ವರ್ ತೆಗೆದು ತಮ್ಮದೆಗೆ ಗುಂಡಿಕ್ಕಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.