ಕುವೈತ್, ಅ 6 (Daijiworld News/RD): ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಗುರುತಿಸಿಕೊಳ್ಳುವಂತೆ ಆಗಿದೆ. ಹಿಂದೆ ಜನಸೇವಕರಾಗಿದ್ದ ಮೋದಿ ಇಂದು ದೇಶದ ಪ್ರಧಾನಿಯಾಗಿದ್ದು, ಇದು ಸಕಾರಾತ್ಮಕ ಬದಲಾವಣೆಯಾಗಿದೆ ಎಂದು ಕರ್ನಾಟಕದ ಸಿಂಘಂ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ ಹೇಳಿದ್ದಾರೆ.
ಅವರು, ಕುವೈತ್ ನ, ಅಮೆರಿಕ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಭಾರತೀಯ ಪ್ರವಾಸಿ ಪರಿಷತ್ ಆಯೋಜಿಸಿದ್ದ ''ಕರುನಾಡ ಡಿಂಡಿಮಾ'' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ಜನಿಸದಿದ್ದರೂ ಕನ್ನಡಿಗರು ನನಗೆ ನೀಡುವ ಪ್ರೀತಿ ಅಭಿಮಾನ ಗೌರವಕ್ಕೆ ನಾನು ಚಿರಋಣಿ. ಹಾಗಾಗಿ ಎಲ್ಲೇ ಇದ್ದರೂ ಕನ್ನಡಿಗರು ತಮ್ಮ ತಾಯ್ನಾಡಿನ ಬಗ್ಗೆ ಹೆಮ್ಮೆ ಪಡಬೇಕೆಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಜಾಗತಿಕ ಮಟ್ಟದಲ್ಲಿ ವಿದೇಶಿ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯ ಬೆಸೆಯುವ ಕಾರ್ಯ ಆಗುತ್ತಿದ್ದು ವಿಶ್ವದಾದ್ಯಂತ ಭಾರತವನ್ನು ಗುರುತಿಸಿಕೊಳ್ಳುವಂತೆ ಆಗಿದೆ. ಮೋದಿಯವರ ನೇತೃತ್ವದಲ್ಲಿ ಭಾರತದಲ್ಲಿ ಸುನಾಮಿ ಅಲೆಯೊಂದು ಸೃಷ್ಠಿಯಾಗಿದ್ದು, ಬದಲಾವಣೆಯ ಪರ್ವ ಆರಂಭವಾಗಿದೆ. ಹೀಗಾಗಿ ಈ ಒಂದು ರಾಷ್ಟ್ರಕ್ಕೆ ಈ ರೀತಿಯ ಆಡಳಿತ ಮುಖ್ಯ, ಈ ರೀತಿ ಬೆಳವಣಿಗೆ ನಡೆದಾಗ ಹಲವಾರು ಟೀಕೆ, ಅಡೆ ತಡೆಗಳು ಬರುತ್ತಿದ್ದು, ಅಂತಹ ಸಂಗತಿಗಳು ಅಶೋಕ, ಮೌರ್ಯ, ಬಾಬರ್ ಮತ್ತು ಅಕ್ಬರ್ ಭಾರತದಲ್ಲಿ ಆಳ್ವಿಕೆ ನಡೆಸಿದಾಗ ಗಮನಿಸಬಹುವುದು. ಮೊದಲು ಜನಸೇವಕರಾಗಿದ್ದ ಮೋದಿ ಇಂದು ದೇಶದ ಪ್ರಧಾನಿಯಾಗಿದ್ದು, ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ, ಈ ಮೂಲಕ ಸಕರಾತ್ಮಕ ಬದಲಾವಣೆಯತ್ತ ಭಾರತ ಸಾಗುತ್ತಿದೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿಯನ್ನು ಶ್ಲಾಘಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ ಕೇಂದ್ರಬಿಂದುವಾಗಿದ್ದು, ಅಲ್ಲಿನ ಜನ ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಅವರನ್ನು ಸನ್ಮಾನಿಸುವಾಗ ಎದ್ದು ನಿಂತು ಗೌರವಿಸಿದರು. ಕಾರ್ಯಕ್ರಮದಲ್ಲಿ ವಕೀಲ ಸುಮೋದ್, ಸತೀಶ್ಚಂದ್ರ ಶೆಟ್ಟಿ, ಫ್ರಾ.ಡೊಮಿನಿಕ್ ಸಿಕ್ವೆರಾ, ರಣವೀರ್ ಭಾರತಿ, ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ, ಪ್ರೊ.ಕೃಷ್ಣೇ ಗೌಡ ಉಪಸ್ಥಿತರಿದ್ದರು.
ಅಣ್ಣಮಲೈ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ