ಬೀಜಿಂಗ್, ಅ.09(Daijiworld News/SS): ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ವಿವಾದ ಪ್ರಸ್ತಾಪಿಸಿ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ತಮ್ಮ ಎರಡು ದಿನಗಳ ಚೀನಾ ಪ್ರವಾಸದಲ್ಲಿ ಈ ವಿಷಯ ಪ್ರಸ್ತಾಪಿಸುವ ಸಾಧ್ಯತೆಗಳ ಬೆನ್ನಲ್ಲೆಯೇ ಚೀನಾ ವಿದೇಶಾಂಗ ಇಲಾಖೆ, ಕಾಶ್ಮೀರ ವಿವಾದವು ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಚಾರವಾಗಿದ್ದು, ಉಭಯ ರಾಷ್ಟ್ರಗಳು ಪರಸ್ಪರ ಮಾತುಕತೆ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದೆ.
ಭಾರತ 370ನೇ ವಿಧಿ ರದ್ದು ಮಾಡಿ ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ದಿಟ್ಟ ನಿರ್ಧಾರ ಪ್ರಕಟಿಸಿದ ಬಳಿಕ ಪಾಕ್ ಪರ ಸಹಾನೂಭೂತಿ ತೋರುವ ರೀತಿಯಲ್ಲಿ ಮಾತನಾಡಿದ್ದ ಚೀನಾ ಈಗ, ಭಾರತ-ಪಾಕ್ ಪರಸ್ಪರ ಮಾತುಕತೆ ಮೂಲಕ ಈ ವಿವಾದ ಬಗೆಹರಿಸಿಕೊಳ್ಳಬೇಕು ಎಂದಿದೆ.
ಕ್ಸಿ ಜಿನ್ಪಿಂಗ್ ಅವರು ಪ್ರಧಾನಿ ಮೋದಿ ಜತೆ ಅನೌಪಚಾರಿಕ ಸಭೆ ನಡೆಸಲು ಸದ್ಯದಲ್ಲೇ ಭಾರತ ಭೇಟಿ ಕೈಗೊಳ್ಳಲಿದ್ದು, ಇದಕ್ಕೂ ಮುನ್ನವೇ ಇಮ್ರಾನ್ ಬೀಜಿಂಗ್ ತೆರಳಿ ಅಲ್ಲಿನ ನಾಯಕರ ಜತೆ ಮಾತುಕತೆ ನಡೆಸುತ್ತಿರುವುದು ಮಹತ್ವದ ಪಡೆದಿದೆ. ಇಮ್ರಾನ್ ಪಾಕ್ ಪ್ರಧಾನಿಯಾದ ಬಳಿಕ ಚೀನಾ ಪ್ರವಾಸ ಕೈಗೊಂಡಿರುವುದು ಇದು ಮೂರನೇ ಬಾರಿಯಾಗಿದೆ.