ವಾಷಿಂಗ್ಟನ್, ಅ.16 (DaijiworldNews/AA): 16 ವರ್ಷದ ಬಾಲಕನೋರ್ವ ಅಮೆರಿಕದ ಒರೆಗಾನ್ ಪ್ರಾಂತ್ಯದ ಬೆಂಡ್ ನಗರದಲ್ಲಿರುವ ಎಲಿಮೆಂಟರಿ ಶಾಲೆಯಲ್ಲಿ ಗುರುವಾರ ಮಧ್ಯಾಹ್ನ ಭೀಕರ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ ಮೂವರು ಮಕ್ಕಳು, ಒಬ್ಬ ಶಿಕ್ಷಕ, ಅಪ್ರಾಪ್ತ ಶೂಟರ್ ಸೇರಿ ಐವರು ಮೃತಪಟ್ಟಿದ್ದಾರೆ.

5, 8 ಮತ್ತು 11 ವರ್ಷ ವಯಸ್ಸಿನ ಮಕ್ಕಳು, ಓರ್ವ ಶಿಕ್ಷಕ ಜೊತೆಗೆ ಅಪ್ರಾಪ್ತ ಶೂಟರ್ ಕೂಡ ಮೃತಪಟ್ಟಿದ್ದಾನೆ. ದಾಳಿಯಲ್ಲಿ 7 ವರ್ಷದ ಮತ್ತೊಬ್ಬ ಬಾಲಕಿ ಹಾಗೂ 54 ವರ್ಷದ ಶಿಕ್ಷಕಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಶಾಲಾ ಆವರಣದ ಸಮೀಪ ನಿಲ್ಲಿಸಲಾಗಿದ್ದ ಕಾರೊಂದರ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸುತ್ತಿದ್ದಾನೆ ಎಂದು ಪೊಲೀಸರಿಗೆ ಕರೆಗಳು ಬಂದವು. ಕರೆ ಬಂದ ಕೆಲವೇ ನಿಮಿಷಗಳಲ್ಲಿ ಶಂಕಿತ ಆರೋಪಿಯು ಬಂದೂಕು ಹಿಡಿದು ಶಾಲೆಯ ಕಟ್ಟಡದೊಳಗೆ ನುಗ್ಗಿದ್ದಾನೆ.
ಇದನ್ನು ಕಂಡ ಸ್ಥಳೀಯ ಸಮುದಾಯದ ಪ್ರಜೆಯೊಬ್ಬರು ತಕ್ಷಣವೇ ಆತನ ಮೇಲೆ ಗುಂಡು ಹಾರಿಸಿ, ಶಾಲೆಯೊಳಗೆ ಹಿಂಬಾಲಿಸಿ ಆತನನ್ನು ನಿಷ್ಕ್ರಿಯಗೊಳಿಸಿ ಹೊಡೆದುರುಳಿಸಿದ್ದಾರೆ. ದಾಳಿ ನಡೆಸಿದ 16 ವರ್ಷದ ಅಪ್ರಾಪ್ತ ಶೂಟರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆತ ಬಳಸಿದ ಬಂದೂಕಿನ ಮಾದರಿ, ಮದ್ದುಗುಂಡುಗಳು ಮತ್ತು ಶಾಲೆಯೊಂದಿಗೆ ಆತನಿಗಿದ್ದ ಸಂಪರ್ಕದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ಶಾಲಾ ಆಡಳಿತ ಮಂಡಳಿಯು ಕಟ್ಟಡವನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಿತು. ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡಗಳು ಉಳಿದ ನೂರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸುರಕ್ಷಿತವಾಗಿ ಪಕ್ಕದ ಆವರಣಕ್ಕೆ ಸ್ಥಳಾಂತರಿಸಿ, ಪೋಷಕರ ವಶಕ್ಕೆ ಒಪ್ಪಿಸಿದವು.