ಶ್ರೀಲಂಕಾ, ನ 16 (Daijiworld News/MSP): ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಗೆ ಮತದಾನ ಮಾಡಲು ತೆರಳುತ್ತಿದ್ದ ಮುಸ್ಲಿಂ ಮತದಾರರಿದ್ದ ಬಸ್ಗಳ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ.
"ವಾಯುವ್ಯ ಪಟ್ಟಣವಾದ ಪುಟ್ಟಲಂನಿಂದ ನೂರಾರು ಮುಸ್ಲಿಂ ನಿವಾಸಿಗಳನ್ನು ಕರೆದೊಯ್ಯುತ್ತಿದ್ದ ನೂರಕ್ಕೂ ಅಧಿಕ ವಾಹನಗಳಿಗೆ ಬೆಂಗಾವಲಾಗಿ ತೆರಳುತ್ತಿದ್ದ ವಾಹನಗಳ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿ ಬಸ್ಗಳ ಮೇಲೆ ಕಲ್ಲುತೂರಾಟ ನಡೆಸಿದರು. ರಸ್ತೆಯಲ್ಲಿ ಟೈರ್ಗಳನ್ನು ಸುಟ್ಟು ರಸ್ತೆ ತಡೆ ನಡೆಸಿದರು. ಗುಂಡು ಹಾಗೂ ಕಲ್ಲು ತೂರಾಟದಿಂದ ಎರಡು ಬಸ್ ಗಳಿಗೆ ಹಾನಿಯಾಗಿದೆ" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಈಸ್ಟರ್ ಭಾನುವಾರದ ಚರ್ಚ್ ದಾಳಿಯ ಘಟನೆಯ ಕೇವಲ ಏಳು ತಿಂಗಳ ನಂತರ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಚರ್ಚ್ ಹಾಗೂ ಹೋಟೆಲ್ಗಳ ಮೇಲಿನ ದಾಳಿಯಲ್ಲಿ 269 ಜನರು ಸಾವನ್ನಪ್ಪಿದರು.
ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯ ಕಣದಲ್ಲಿ 35 ಅಭ್ಯರ್ಥಿಗಳಿದ್ದು ಇಬ್ಬರು ಮಾಜಿ ಅಧ್ಯಕ್ಷರ ಕುಟುಂಬ ಸದಸ್ಯರಾದ ಗೋಟಬಾಯ ರಾಜಪಕ್ಸ ಮತ್ತು ಸಜಿತ್ ಪ್ರೇಮದಾಸ ಮಧ್ಯೆ ನೇರ ಹಣಾಹಣಿ ಇದೆ. ಇಲ್ಲಿ ತಮಿಳು ಮತ್ತು ಮುಸ್ಲಿಂ ಗುಂಪುಗಳು ಮತಗಳು ನಿರ್ಣಾಯಕವೆಂದು ಪರಿಗಣಿಸಲಾಗಿದೆ.