ಆಸ್ಟ್ರೇಲಿಯಾ, ನ 18 (Dijiworld News/MB): ಮೊಸಳೆ ಬಾಯಿಯ ಹಿಡಿತದಿಂದ ಜೀವಂತವಾಗಿ ಹೊರಬರುವುದೇ ಕಷ್ಟ. ಹೀಗಿರುವಾಗ ಮೊಸಳೆ ಬಾಯಿಗೆ ಸಿಲುಕಿ ಒದ್ದಾಡಿದ ವ್ಯಕ್ತಿ ಅದರ ಬಾಯಿಯಿಂದ ಜೀವಂತವಾಗಿ ಹೊರ ಬಂದಿದ್ದಾನೆ.
ಉತ್ತರ ಆಸ್ಟ್ರೇಲಿಯಾದಲ್ಲಿ ಈ ಘಟನೆ ನಡೆದಿದ್ದು 54ರ ಹರೆಯದ ವೈಲ್ಡ್ ಲೈಫ್ ರೇಂಜರ್ ಆಗಿರುವ ಕ್ರೇಗ್ ಡಿಕ್ಮನ್ ಮೀನು ಹಿಡಿಯಲೆಂದು ತೆರಳಿದ್ದ ವೇಳೆ ಮೊಸಳೆ ಬಾಯಿಗೆ ಸಿಲುಕಿದ್ದು ಸಾವಿನಂಚಿನಲ್ಲಿಯೂ ಸಾಹಸ ಮೆರೆದು ಪ್ರಾಣಕ್ಕಾಗಿ ಸೆಣೆಸಾಡಿ ಮೊಸಳೆಯ ಅದರ ಕಣ್ಣಿಗೆ ಬೆರಳಿನಿಂದ ತಿವಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡಿದ್ದ ವೈಲ್ಡ್ ಲೈಫ್ ರೇಂಜರ್ ನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಡಿಕ್ಮನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, "ಮೊಸಳೆಯು 9 ಅಡಿ ಇದ್ದು ಮೀನು ಹಿಡಿಯಲು ಹೋದಾಗ ಮೊಸಳೆ ನನನ್ನು ಹಿಡಿದಿದೆ. ನನಗೆ ಇನ್ನೂ ಆ ಮೊಸಳೆಯ ಶಬ್ದ ಹತ್ತಿರವೇ ಕೇಳಿದಂತೆ ಭಾಸವಾಗುತ್ತದೆ. ಅದರ ಕಣ್ಣು ಅತಿಯಾದ ಮೆದು ಭಾಗವಾದ್ದರಿಂದ ನಾನು ಅದರ ಕಣ್ಣಿಗೆ ನನ್ನ ಬೆರಳಿಂದ ತಿವಿದೆ. ಅದು ನೋವಿನಿಂದ ಹಿಡಿತ ಸಡಿಲಿಸಬಹುದೆಂದು ನನಗೆ ಅನಿಸಿತ್ತು. ಅದರ ಮೂಳೆಗಳು ಸಿಗುವವರೆಗೂ ಬೆರಳಿನಿಂದ ತಿವಿದೆ. ನಂತರ ಬಾಯಿಯಿಂದ ಹೊರ ಬಂದೆ" ಎಂದು ಹೇಳಿದ್ದಾರೆ.