ಸಿಂಗಾಪುರ, ನ.21(Daijiworld News/SS): ಸಿಂಗಾಪುರದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕಿಸ್ತಾನದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ನೆರೆ ರಾಷ್ಟ್ರ ತನ್ನ ಹೆಸರಿಗೆ ತಕ್ಕಂತೆ ಮುಂದೆ ಸಾಗುತ್ತಿಲ್ಲ. ಸದಾಕಾಲ ಇತರೆ ರಾಷ್ಟ್ರಗಳ ಮೇಲೆ ದುಷ್ಕೃತ್ಯವೆಸಗುವುದೇ ಅದಕ್ಕೆ ಮುಖ್ಯವಾಗಿದೆ. ಹಲವು ವರ್ಷಗಳಿಂದಲೂ ಭಾರತೀಯ ಯೋಧರನ್ನು ಉಗ್ರರು ಹತ್ಯೆ ಮಾಡುತ್ತಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಇತಿಹಾಸದಲ್ಲಿಯೇ ನೂರಾರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಭಾರತ ಒಗ್ಗೂಡಿದೆ. ರಾಷ್ಟ್ರೀಯ ಹಿತಾಸಕ್ತಿ ಹಾಗೂ ರಾಷ್ಟ್ರದ ಹೆಮ್ಮೆ ವಿಚಾರದಲ್ಲಿ ನಾವು ಎಂದಿಗೂ ರಾಜಿಯಾಗುವುದಿಲ್ಲ. ಸರ್ಕಾರ ರಚನೆ ಮಾಡುವಲ್ಲಿ ಮಾತ್ರವೇ ನಾವು ರಾಜಕೀಯ ಮಾಡುವುದಿಲ್ಲ. ರಾಷ್ಟ್ರ ಕಟ್ಟಲು ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಹಿಂದೆ ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಯೋಜಿಸಲಾಗಿರಲಿಲ್ಲ. 370ನೇ ವಿಧಿ ಇದ್ದ ಕಾರಣ ಸಾಕಷ್ಟು ಬದಲಾವಣೆಗಳಿದ್ದವು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಾವು ನೀಡಿದ್ದ ಎಲ್ಲಾ ಭರವಸೆಗಳನ್ನು ಒಂದಾದಾಗಿ ಪೂರೈಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.