ಲಂಡನ್, ನ 23 (Daijiworld News/MSP): ಭಾರತೀಯ ಮೂಲದ 9 ತಿಂಗಳ ಗರ್ಭಿಣಿಯ ಹೊಟ್ಟೆಗೆ ಬಾಣ ಬಿಟ್ಟು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಪತಿಗೆ ಲಂಡನ್ ನ್ಯಾಯಾಲಯ ಶಿಕ್ಷೆ ಜಾರಿ ಮಾಡಿದೆ.
ಈ ಘಟನೆಯೂ ಪೂರ್ವ ಲಂಡನ್ ನ ಇಲ್ಫೋರ್ಡ್ ನಲ್ಲಿ ಕಳೆದ ವರ್ಷದ ನವೆಂಬರ್ ನಲ್ಲಿ ನಡೆದಿದ್ದು , ಭಾರತೀಯ ಮೂಲದ ಮಹಿಳೆ ದೇವಿ(35) ವಾಸಿಸುತ್ತಿದ್ದ ಮನೆಯಲ್ಲಿಯೇ ಹೊಂಚು ಹಾಕಿ ಕುಳಿತಿದ್ದ ಆಕೆಯ ಮಾಜಿ ಪತಿ ಮೂಲತಃ ಮಾರಿಷಸ್ ನ ರಾಮನೋಡ್ಜ್ ಉನ್ಮಥಲ್ಲೆಗಡೂ ಮನೆಯಲ್ಲಿ ಯಾರು ಇಲ್ಲವೆಂದು ಆಕೆಯ ಮೇಲೆ ಬಿಲ್ಲು ಬಾಣದಿಂದ ದಾಳಿ ನಡೆಸಿದ್ದ. ಮಾಜಿ ಪತಿ ಬಿಟ್ಟ ಬಾಣ ನೇರವಾಗಿ ಆಕೆಯ ಹೊಟ್ಟೆಯನ್ನು ಸೀಳಿದ್ದು ತೀವ್ರ ರಕ್ತಸ್ರಾವಕೊಂಡು ಒದ್ದಾಡುತ್ತಿದ್ದ ದೇವಿಯನ್ನು ಕಂಡ ಆಕೆಯ 2ನೇ ಪತಿ ಇಮ್ತಿಯಾಜ್ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರಾದರೂ ಚಿಕಿತ್ಸೆಫಲಕಾರಿಯಾಗದೆ ಮೃತಪಟ್ಟಿದ್ದರು.
ಆಸ್ಪತ್ರೆಯಲ್ಲಿ ವೈದ್ಯರು ತಡಮಾಡದೆ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಸಿಸೇರಿಯನ್ ಮೂಲಕ ಹೊರ ತೆಗೆಯುವಲ್ಲಿ ಸಫಲರಾಗಿದ್ದು ಮಗು ಪವಾಡ ಸದೃಶ್ಯವಾಗಿ ಪಾರಾಗಿತ್ತು.
ದೇವಿ, ರಾಮನ್ಡೊಗೆ ಉನ್ಮಾಥಲೇಗಡೂ ಎಂಬಾತನನ್ನು ವಿವಾಹವಾಗಿದ್ದು ಈ ದಂಪತಿಗೆ ಮೂವರು ಮಕ್ಕಳಿದ್ದು, ಬಳಿಕ ಈಕೆ ಆತನಿಗೆ ವಿಚ್ಛೇದನ ನೀಡಿದ್ದರು. ಆ ಬಳಿಕ ಇಮ್ತಿಯಾಜ್ ಮೊಹಮದ್ ಎಂಬಾತನನ್ನು ವಿವಾಹವಾಗಿ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು ಸನಾ ಮೊಹಮದ್ ಎಂದು ಬದಲಾಯಿಸಿ ಮಕ್ಕಳೊಂದಿಗೆ ವಾಸಿಸುತ್ತಿದ್ದಳು.
ಮರುಮದುವೆಯಾಗಿ ಹೊಸ ಜೀವನವನ್ನು ಪ್ರಾರಂಭಿಸಿದ ತನ್ನ ಮಾಜಿ ಪತ್ನಿಯ ಬಗ್ಗೆ ಹೊಟ್ಟೆಕಿಚ್ಚು ಮತ್ತು ಅಸೂಯೆ ಭಾವನೆಯಿಂದ ಈ ಕೃತ್ಯ ಎಸಗಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಟ್ರೋಪಾಲಿಟನ್ ಪೊಲೀಸರ ನರಹತ್ಯೆ ಮತ್ತು ಮೇಜರ್ ಕ್ರೈಮ್ ಕಮಾಂಡ್ ನ ಪತ್ತೆದಾರರು ನಡೆಸಿದ ತನಿಖೆಯಲ್ಲಿ ಆತ ಹಲವಾರು ತಿಂಗಳ ಹಿಂದೆಯೇ ದಾಳಿಗೆ ಸಿದ್ಧತೆಗಳನ್ನು ಪ್ರಾರಂಭಿಸಿದ್ದ ಎಂದು ತಿಳಿದುಬಂದಿದೆ.